ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಶ್ವಥ್ ನಾರಾಯಣ್ ನೀನು, ನಿನ್ನ ಪಕ್ಷ ಭ್ರಷ್ಟಾಚಾರದ ಪಿತಾಮಹರು. ರಾಮನಗರದಲ್ಲಿ ಒಂದೂ ಕ್ಷೇತ್ರ ಗೆಲ್ಲಲಾಗದವ, ಅಲ್ಪಸಂಖ್ಯಾತ ನಾಯಕನನ್ನು ಅಸಮರ್ಥ ಎನ್ನುತ್ತೀಯಾ ಎಂದು ಡಿ.ಕೆ ಶಿವಕುಮಾರ್ ಗುಡುಗಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ರಸಗೊಬ್ಬರ ಕೊರತೆ ವಿಚಾರವಾಗಿ ನಡೆದ ಚರ್ಚೆ ವೇಳೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಬುಧವಾರ ಬಿರುಸಿನ ಮಾತಿನ ಚಕಮಕಿ ನಡೆಯಿತು. ಈ ವೇಳೆ ಅಶ್ವಥ್ ನಾರಾಯಣ್ ಮಧ್ಯಪ್ರವೇಶಿಸಿ ವಾಗ್ವಾದ ಆರಂಭಿಸಿದರು. ಆಗ ಸಚಿವ ಕೆ.ಜೆ ಜಾರ್ಜ್, ಸುಳ್ಳು ಹೇಳಬೇಡಿ ಎಂದು ಹೇಳಿದಾಗ, ಅಶ್ವಥ್ ನಾರಾಯಣ್, ಸ್ಮಾರ್ಟ್ ಮೀಟರ್ ವಿಚಾರವಾಗಿ ಮಾತನಾಡಲು ನಿಮಗೆ ಧಮ್, ಯೋಗ್ಯತೆ ಇಲ್ಲ. ನೀವು ಅಸಮರ್ಥ ಎಂದು ಟೀಕಿಸಿದ್ದಾರೆ.
ಈ ವೇಳೆ ಮಧ್ಯ ಪ್ರವೇಶಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ಅಸಮರ್ಥರು ಅವರಲ್ಲ. ನೀವು ಅಸಮರ್ಥರು. ರಾಜ್ಯದ ಜನ ಮತ ನೀಡಿ ಅಧಿಕಾರ ನಡೆಸಲು ಅವಕಾಶ ನೀಡಿರುವ ಜಾರ್ಜ್ ಅವರು ಅಸಮರ್ಥರಲ್ಲ. ನೀವು ಅಸಮರ್ಥರಾಗಿರುವ ಕಾರಣ ನಿಮ್ಮ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತಿದೆ ಎಂದು ತಿರುಗೇಟು ನೀಡಿದ್ದಾರೆ.