September 23, 2026
Wednesday, September 23, 2026
spot_img

ಸರ್ಕಾರಿ ಕೆಲಸ ಎಂದು ಮನಬಂದ ಟೈಮ್‌ಗೆ ಬರೋ ಹಾಗಿಲ್ಲ! 10 ಗಂಟೆಗೆ ಹಾಜರಿ ಕಡ್ಡಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಮೊದಲು ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ರಾಜ್ಯದ ಸರ್ಕಾರಿ ಅಧಿಕಾರಿಗಳು ಮನಸ್ಸಿಗೆ ಬಂದ ಟೈಮ್‌ಗೆ ಕಚೇರಿಗೆ ಬರುವುದು, ಇಷ್ಟಬಂದಷ್ಟು ಸಮಯ ಬ್ರೇಕ್‌ ತೆಗೆದುಕೊಳ್ಳುವುದು ಗಮನಕ್ಕೆ ಬಂದಿದ್ದು, ಇದೀಗ ಸಿಎಂ ಡಿಕೆಶಿ ಎಲ್ಲರೂ ಕಡ್ಡಾಯವಾಗಿ ಕಚೇರಿಗೆ ಬೆಳಗ್ಗೆ 10 ಗಂಟೆಯೊಳಗೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.

ಪಾರದರ್ಶಕ ಆಡಳಿತ ತರುವ ಉದ್ದೇಶದಿಂದ ಬಯೋಮೆಟ್ರಿಕ್‌ ವ್ಯವಸ್ಥೆ ಬದಲಾಗಿ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಹಾಗೂ ಜಿಪಿಎಸ್‌ ಆಧರಿತ ಹಾಜರಾತಿಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಚೆಕ್ ಇನ್, ಚೆಕ್ ಔಟ್ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದ್ದು, ಸಿಎಂ ಡಿ.ಕೆ ಶಿವಕುಮಾರ್‌ ಅವರ ಸೂಚನೆ ಮೇರೆ ಆದೇಶ ಹೊರಡಿಸಿದ್ದಾರೆ.

ಪ್ರಸ್ತುತ ಇ ಆಡಳಿತ ಇಲಾಖೆಯು ಸಿದ್ಧಪಡಿಸಿರುವ ಕರ್ತವ್ಯ ಆಪ್‌ನಲ್ಲಿ ಈಗಾಗಲೇ ಎಚ್‌ಆರ್‌ಎಮ್‌ಎಸ್‌ನಲ್ಲಿ ಲಭ್ಯವಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮಾಹಿತಿಯನ್ನು ನೋಂದಾಯಿಸಲಾಗಿದೆ. ಈ ನಿಯಮವನ್ನು ಕೇವಲ ಆದೇಶಕ್ಕೆ ಸೀಮಿತಗೊಳಿಸದೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಇ-ಆಡಳಿತ ಇಲಾಖೆಯು ಅತ್ಯಾಧುನಿಕ AI ತಂತ್ರಾಂಶವನ್ನು ಬಳಸಿಕೊಳ್ಳುತ್ತಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಗೆ ಹಾಜರಾತಿ ದಾಖಲಿಸದ ಅಧಿಕಾರಿ ಮತ್ತು ಸಿಬ್ಬಂದಿಗಳ ಜಿಲ್ಲಾವಾರು ಹಾಗೂ ಕಚೇರಿವಾರು ಮಾಹಿತಿಯನ್ನು AI ತಂತ್ರಾಂಶವು ಸ್ವಯಂಚಾಲಿತವಾಗಿ ವರದಿ ಸಿದ್ಧಪಡಿಸಲಿದೆ. ಈ AI ಜನರೇಟೆಡ್ ವರದಿಯನ್ನು ಆಯಾ ಇಲಾಖೆಯ ಮುಖ್ಯಸ್ಥರ ವೈಯಕ್ತಿಕ ಲಾಗಿನ್ ಡ್ಯಾಶ್‌ ಬೋರ್ಡ್‌ಗೆ ನೇರವಾಗಿ ಕಳುಹಿಸಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !