ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೊಸ ವರ್ಷದ ಪಾರ್ಟಿಗೆ ತೆರಳಲು ಹಾಗೂ ವಾಪಾಸಾಗಲು ಮೆಟ್ರೋ ಸೇವೆಯನ್ನು ಇಂದು ತಡರಾತ್ರಿ 2 ಗಂಟೆಗೆ ವಿಸ್ತರಣೆ ಮಾಡಲಾಗಿದೆ. ಆದರೆ ಪಾರ್ಟಿ ವೇಳೆ ಕುಡಿದು ಬರುವವರಿಗೆ ಮೆಟ್ರೋದಲ್ಲಿ ಎಂಟ್ರಿ ಇಲ್ಲ.
ನಮ್ಮ ಮೆಟ್ರೋ ಕೂಡ ಹೊಸ ವರ್ಷಾಚರಣೆ ಸಂದರ್ಭ ಪ್ರಯಾಣಿಕರ ನಿರ್ವಹಣೆಗೆ ಒಂದಷ್ಟು ತಯಾರಿ ಮಾಡಿಕೊಂಡಿದೆ. ಸಂಭ್ರಮದಲ್ಲಿ ಕುಡಿದು ಹುಚ್ಚಾಟ ಆಡುವವರ ಬಗ್ಗೆಯೂ ಹದ್ದಿನ ಕಣ್ಣಿಡುವ ಮೂಲಕ ಅಂಥವರ ಆಟಾಟೋಪಕ್ಕೆ ಬ್ರೇಕ್ ಹಾಕಲು ಬೇಕಾದ ತಯಾರಿ ಮಾಡಿಕೊಂಡಿದೆ. ಡಿಸೆಂಬರ್ – 31 ರ ರಾತ್ರಿ ಮದ್ಯಪಾನ ಮಾಡಿ ಬರುವ ಪ್ರಯಾಣಿಕರಿಗೆ ಈ ಬಾರಿ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಲು ಅವಕಾಶ ನೀಡುವುದಿಲ್ಲ ಎಂದು ಬಿಎಂಆರ್ಸಿಎಲ್ ಹೇಳಿದೆ.
ಕುಡಿದು ಬಂದು ಮಹಿಳೆಯರ ಜೊತೆಗೆ ಕಿರಿಕ್ ಮಾಡಿದರೆ, 500 ರುಪಾಯಿ ದಂಡ ವಿಧಿಸುವುದಾಗಿ ಬಿಎಂಆರ್ಸಿಎಲ್ ತಿಳಿಸಿದೆ. ಮಹಿಳೆಯರಿಗೆ ತೊಂದರೆ ನೀಡಿದರೆ ಅಂಥವರನ್ನು ಪೋಲಿಸ್ ವಶಕ್ಕೆ ನೀಡಲಾಗುವುದು ಎಂದೂ ತಿಳಿಸಿದೆ. 31 ರ ರಾತ್ರಿ ಮಹಿಳೆಯರ ಸುರಕ್ಷತೆಗಾಗಿ ಪ್ರತಿ ಮೆಟ್ರೋ ಕೋಚ್ನಲ್ಲೂ ಮಹಿಳಾ ಸೆಕ್ಯುರಿಟಿ ಮತ್ತು ಪ್ಯಾಟ್ರೋಲ್ ಟೀಮ್ ನೇಮಕ ಮಾಡಲಾಗಿದೆ.