ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರ ವಿಧಾನಸಭಾ ಚುನಾವಣೆಯಲ್ಲಿ ಪೀಠಾಪುರಂ ಕ್ಷೇತ್ರದಿಂದ ಪವರ್ ಸ್ಟಾರ್ ಪವನ್ ಕಲ್ಯಾಣ್ ಭರ್ಜರಿ ಗೆಲುವು ಸಾಧಿಸಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಮತ್ತೊಂದೆಡೆ ಮೆಗಾಸ್ಟಾರ್ ಚಿರಂಜೀವಿ ತನ್ನ ಸಹೋದರ ಪವನ್ ಕಲ್ಯಾಣ್ ಗೆ ಶುಭಕೋರಿ ಟ್ವೀಟ್ ಮಾಡಿದ್ದಾರೆ.
‘ಪ್ರೀತಿಯ ಕಲ್ಯಾಣ್ ಬಾಬು..ಏಳು-ಬೀಳು ಕಂಡಿರುವ ನೀನು ಜನರ ಉನ್ನತಿಗಾಗಿ ಹೋರಾಡಿ ಗೆಲುವು ಸಾಧಿಸಿರುವುದನ್ನು ನೋಡಿದಾಗ ಸಹೋದರನಾಗಿ ಹೆಮ್ಮೆಪಡುತ್ತೇನೆ.ನೀನು ನಿಜವಾಗಿಯೂ ಈ ಚುನಾವಣೆಯ ಗೇಮ್ ಚೇಂಜರ್. ಮ್ಯಾನ್ ಆಫ್ ದಿ ಮ್ಯಾಚ್ ನಿನಗೆ ಸಲ್ಲಬೇಕು! ನಿನ್ನ ಶ್ರಮ, ನಿನ್ನ ತ್ಯಾಗ, ನಿನ್ನ ಧ್ಯೇಯ ಮತ್ತು ನಿನ್ನ ಸತ್ಯವು ಜನರಿಗಾಗಿ ಮುಡಿಪಾಗಲಿ. ಜನರು ನಿನ್ನನ್ನು ಹೊಗಳಿದಾಗ ನನ್ನ ಹೃದಯವು ಹಿಗ್ಗುತ್ತದೆ. ಈ ಅದ್ಭುತ ಸಾರ್ವಜನಿಕ ತೀರ್ಪು ರಾಜ್ಯದ ಭವಿಷ್ಯ, ಜನರ ಕಲ್ಯಾಣಕ್ಕಾಗಿ ಬಳಸು. ನಿನ್ನ ಕನಸು ಮತ್ತು ಗುರಿ ಸಾಕಾರಗೊಳಿಸುವ ದಿಕ್ಕಿನಲ್ಲಿ ದೇವರು ನಿನಗೆ ಮಾರ್ಗದರ್ಶನ ನೀಡಲಿ ಎಂದು ಹಾರೈಸುತ್ತೇನೆ, ಆಶೀರ್ವದಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೇ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರಿಗೆ ಟ್ವೀಟ್ ಮಾಡಿ ಶುಭ ಹಾರೈಸಿದ್ದಾರೆ. ‘ಆತ್ಮೀಯ ಚಂದ್ರಬಾಬು ನಾಯ್ಡು ಅವರೇ, ಇತಿಹಾಸದಲ್ಲಿ ಅಪರೂಪದ ಗೆಲುವಿಗಾಗಿ ನಿಮಗೆ ಮೊದಲಿಗೆ ಶುಭಾಶಯಗಳು ಮತ್ತು ಅಭಿನಂದನೆಗಳು. ಈ ಮಹಾನ್ ಗೆಲುವು ನಿಮ್ಮ ಮೇಲಿನ ಜನರ ನಂಬಿಕೆ, ನಿಮ್ಮ ನಾಯಕತ್ವ ಕೌಶಲ್ಯ ಮತ್ತು ಗತ ವೈಭವವನ್ನು ಮರಳಿ ತರುವ ನಿಮ್ಮ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ. ರಾಜ್ಯದ ಜನ, ಪವನ್ ಕಲ್ಯಾಣ್ ಮತ್ತು ನರೇಂದ್ರ ಮೋದಿಯವರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಸಂಪೂರ್ಣವಾಗಿ ಎತ್ತಿ ಹಿಡಿಯುವಿರಿ ಎಂದು ನಾನು ಭಾವಿಸುತ್ತೇನೆ. ಬಂಡವಾಳವಿಲ್ಲದ ಮತ್ತು ಗಾಯಗೊಂಡ ರಾಜ್ಯವನ್ನು ಮತ್ತೆ ಹಳಿಗೆ ತಿರುಗಿಸಿ ಅದನ್ನು ನಂಬರ್ ಒನ್ ಮಾಡುತ್ತೀರಿ ಎಂದು ಅವರು ಟ್ವೀಟ್ ಮಾಡಿದ್ದಾರೆ.