ಮಳೆಗಾಲ ಎಂದರೆ ತಂಪಾದ ಹವಾಮಾನ, ಬೆಚ್ಚಗಿನ ಚಹಾ, ಬಿಸಿ ಬಿಸಿ ತಿಂಡಿಗಳ ಸವಿಯಾಟ. ಆದರೆ ಈ ಋತುವಿನಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಏಕೆಂದರೆ ಈ ಸಮಯದಲ್ಲಿ ಹಲವಾರು ಬ್ಯಾಕ್ಟೀರಿಯಲ್ ಮತ್ತು ವೈರಲ್ ಸೋಂಕುಗಳು ಹೆಚ್ಚು ವ್ಯಾಪಕವಾಗಿರುತ್ತವೆ. ಈ ಸಂದರ್ಭದಲ್ಲಿ ಆಹಾರದ ವಿಷಯದಲ್ಲಿ, ವಿಶೇಷವಾಗಿ ತರಕಾರಿ ಆಯ್ಕೆ ಮಾಡುವಾಗ ಎಚ್ಚರಿಕೆಯಿಂದಿರಬೇಕು. ಕೆಲವು ತರಕಾರಿಗಳನ್ನು ಮಳೆಗಾಲದಲ್ಲಿ ಸೇವಿಸುವುದು ಆರೋಗ್ಯಕ್ಕೆ ಮಾರಕವಾಗಬಹುದು. ಯಾವುವು ಆ ತರಕಾರಿಗಳು.?
ಪಾಲಕ್, ಮೆಂತೆ ಸೊಪ್ಪು ಸೇವನೆ ತಪ್ಪಿಸಿ
ಮಳೆಗಾಲದಲ್ಲಿ ಸೊಪ್ಪು ತರಕಾರಿಗಳು ತೇವಾಂಶ ಹೆಚ್ಚು ಹೀರಿಕೊಳ್ಳುತ್ತವೆ. ಪಾಲಕ್ ಮತ್ತು ಮೆಂತೆ ಸೊಪ್ಪುಗಳಲ್ಲಿ ಶಿಲೀಂಧ್ರಗಳು, ಬ್ಯಾಕ್ಟೀರಿಯಾ ಮತ್ತು ಕೀಟಗಳು ಹೆಚ್ಚು ಹರಡುವ ಅಪಾಯವಿದೆ. ಕಣ್ಣಿಗೆ ಕಾಣದ ಸೂಕ್ಷ್ಮ ಕೀಟಗಳು ಈ ಸೊಪ್ಪುಗಳಲ್ಲಿ ಅಡಗಿರುತ್ತವೆ. ಹೀಗಾಗಿ ಮಳೆಗಾಲದಲ್ಲಿ ಈ ತರಕಾರಿಗಳನ್ನು ಬಿಟ್ಟುಬಿಡುವುದು ಉತ್ತಮ. ಸೇವಿಸಲೇಬೇಕಾದರೆ, ಉಪ್ಪು ಸೇರಿಸಿದ ಬಿಸಿ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು.
ಹೂಕೋಸು, ಎಲೆಕೋಸು ದೂರವಿಡಿ
ಈ ತರಕಾರಿಗಳ ಪದರಗಳ ನಡುವೆ ಶಿಲೀಂಧ್ರಗಳು ಜಮೆಯಾಗುವ ಸಾಧ್ಯತೆ ಇದೆ. ಮಳೆಗಾಲದಲ್ಲಿ ಈ ತರಕಾರಿಗಳು ಇನ್ನಷ್ಟು ತೇವಾಂಶವನ್ನು ಹೀರಿಕೊಳ್ಳುತ್ತವೆ. ಈ ಕಾರಣದಿಂದಾಗಿ ಬಿಸಿ ನೀರಿನಲ್ಲಿ ತೊಳೆಯುವುದರಿಂದಲೂ ಎಲ್ಲಾ ಸೂಕ್ಷ್ಮಜೀವಿಗಳು ದೂರ ಹೋಗುವುದಿಲ್ಲ. ಹೀಗಾಗಿ ಈ ಋತುವಿನಲ್ಲಿ ಹೂಕೋಸು ಮತ್ತು ಎಲೆಕೋಸು ಸೇವನೆ ಮಾಡದಿರುವುದು ಆರೋಗ್ಯಕ್ಕೆ ಉತ್ತಮ.
ಅಣಬೆ ಸೇವನೆ ಕಡಿಮೆ ಮಾಡಿ
ಸಾಮಾನ್ಯ ದಿನಗಳಲ್ಲಿ ಅಣಬೆಗಳು ಪೌಷ್ಟಿಕವಾಗಿದ್ದರೂ ಮಳೆಗಾಲದಲ್ಲಿ ಮಣ್ಣಿನಿಂದ ಇವು ಹೆಚ್ಚು ತೇವಾಂಶವನ್ನು ಹೀರಿಕೊಂಡು ಶಿಲೀಂಧ್ರಗಳಿಂದ ತುಂಬಿಹೋಗುವ ಸಾಧ್ಯತೆ ಹೆಚ್ಚಾಗುತ್ತದೆ. ಹೊರಗೆ ಎಷ್ಟು ಸ್ವಚ್ಛವಾಗಿ ಕಂಡರೂ ಒಳಗೆ ಕೀಟಗಳು ಅಥವಾ ವಿಷಪೂರಿತ ಶಿಲೀಂಧ್ರಗಳು ಇರಬಹುದು. ಹೀಗಾಗಿ ಮಳೆಗಾಲದಲ್ಲಿ ಅಣಬೆ ಸೇವನೆ ತಾತ್ಕಾಲಿಕವಾಗಿ ನಿಲ್ಲಿಸಬೇಕು.
ಆಲೂಗಡ್ಡೆ ಮತ್ತು ಇತರ ಗೆಡ್ಡೆ ತರಕಾರಿಗಳೊಂದಿಗೆ ಎಚ್ಚರಿಕೆ
ಆಲೂಗಡ್ಡೆ, ಕ್ಯಾರೆಟ್, ಸಿಹಿ ಗೆಣಸು ಹೀಗೆ ಮಣ್ಣಿನಲ್ಲಿ ಬೆಳೆಯುವ ತರಕಾರಿಗಳು ಶಿಲೀಂಧ್ರ ಹರಡುವ ಮಹತ್ತರ ಮೂಲ. ವಿಶೇಷವಾಗಿ ಮೊಳಕೆಯೊಡೆದ ಆಲೂಗಡ್ಡೆಗಳಲ್ಲಿ ‘ಸೋಲನೈನ್’ ಎಂಬ ವಿಷಕಾರಿ ಸಂಯುಕ್ತಗಳು ಇದ್ದು ಆರೋಗ್ಯಕ್ಕೆ ಹಾನಿಕಾರಕ. ಈ ತರಕಾರಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಬಳಸದಿದ್ದರೆ, ಗ್ಯಾಸ್, ಅಜೀರ್ಣ, food poison ಸಂಭವಿಸಬಹುದು.
ಋತು ಪ್ರಕಾರ ಆಹಾರ ಆಯ್ಕೆ ಮುಖ್ಯ
ಮಳೆಗಾಲದಲ್ಲಿ ಬದಲಾವಣೆಯ ಹವಾಮಾನಕ್ಕೆ ದೇಹ ಹೊಂದಿಕೊಳ್ಳಬೇಕಾದರೆ ಆಹಾರ ಪದಾರ್ಥಗಳ ಆಯ್ಕೆ ಮುಖ್ಯ. ಸಡಿಲ ನಡವಳಿಕೆ ಆರೋಗ್ಯ ಹಾನಿಗೆ ಕಾರಣವಾಗಬಹುದು. ಹೀಗಾಗಿ ತರಕಾರಿ ಬಳಸುವಾಗ ನಿಗದಿತ ಮುನ್ನೆಚ್ಚರಿಕೆಗಳೊಂದಿಗೆ ಮಾತ್ರ ಬಳಕೆ ಮಾಡುವುದು ಆರೋಗ್ಯಕ್ಕೆ ಉತ್ತಮ.