ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಸು ಫ್ರಮ್ ಸೋ’ ಚಿತ್ರದ ಯಶಸ್ಸು ದೇಶವ್ಯಾಪಿ ಗಮನಸೆಳೆಯುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ನಾಗಾಲೋಟದಿಂದ ಓಡುತ್ತಿರುವ ಈ ಚಿತ್ರ, ಪ್ರೇಕ್ಷಕರಿಂದ ಭರ್ಜರಿ ಪ್ರೀತಿಯನ್ನು ಪಡೆಯುತ್ತಿದೆ. ಈ ನಡುವೆ, ನಿರ್ದೇಶಕ-ನಟ ರಾಜ್ ಬಿ ಶೆಟ್ಟಿ ಹೊಸ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಹೆಸರಾಗುತ್ತಿರುವ ‘ಶೆಟ್ಟಿ ಗ್ಯಾಂಗ್’, ‘ಶೆಟ್ಟಿ ಮಾಫಿಯಾ’ ಎಂಬ ಟ್ಯಾಗ್ಗಳ ಕುರಿತು ಅವರು ನೇರವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಜ್ ಬಿ ಶೆಟ್ಟಿ ತಮ್ಮ ಮೊದಲ ಚಿತ್ರ ಒಂದು ಮೊಟ್ಟೆಯ ಕಥೆ ನಂತರ ಕನ್ನಡ ಚಲನಚಿತ್ರ ರಂಗಕ್ಕೆ ಬಂದಿದ್ದರು. ಅವರು ಹೇಳುವಂತೆ, ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿಯೊಂದಿಗೆ ಅವರ ಸ್ನೇಹ ಈ ಹಿಂದೆಯೇ ಉತ್ತಮವಾಗಿತ್ತು. “ನಮ್ಮ ಸ್ನೇಹ ಪ್ರಾಮಾಣಿಕ. ಪರಸ್ಪರ ಚಿತ್ರಗಳನ್ನು ಮೆಚ್ಚುತ್ತೇವೆ. ಸಹಕಾರ ನೀಡುತ್ತೇವೆ,” ಎಂದಿದ್ದಾರೆ ಅವರು.
‘ಗ್ಯಾಂಗ್’ ಅಂದ್ರೆ ದೋಷವೇನು?
ಸಂದರ್ಶನದ ಪ್ರಮುಖ ಭಾಗವೇ ‘ಶೆಟ್ಟಿ ಗ್ಯಾಂಗ್’ ಕುರಿತು ಮಾತನಾಡಿರುವುದು. “ನೀವೂ ಗ್ಯಾಂಗ್ ಮಾಡಿಕೊಳ್ಳಿ ಬ್ರದರ್. ಬೇಡ ಅಂತ ಹೇಳಿದವ್ರು ಯಾರು?” ಎಂಬ ಮಾತಿನ ಮೂಲಕ, ಗ್ಯಾಂಗ್ ಎಂಬ ಟ್ಯಾಗ್ಗೆ ರಾಜ್ ಬಿ ಶೆಟ್ಟಿ ಹೊಸ ಅರ್ಥ ನೀಡಿದ್ದಾರೆ. ಹಾಲಿವುಡ್ ರಿಪೋರ್ಟರ್ ಇಂಡಿಯಾ ಚಾನೆಲ್ನಲ್ಲಿ ನಡೆದ 40 ನಿಮಿಷಗಳ ಈ ಸಂದರ್ಶನದಲ್ಲಿ, ಅವರ ಮಾತುಗಳು ಸ್ಪಷ್ಟವಾಗಿಯೇ ಹಾಸ್ಯ, ಸ್ನೇಹ ಮತ್ತು ಸ್ಪಷ್ಟತೆಯ ಸಂಕೇತವಾಗಿವೆ.
ಸಿನಿಮಾ ಉದ್ಯಮದಲ್ಲಿ ಪ್ರಾಮಾಣಿಕತೆಗೆ ಕಳಪೆ ಎಂದೇ ಹೆಸರು. ಆದರೆ ರಾಜ್ ಬಿ ಶೆಟ್ಟಿ, ರಿಷಬ್ ಹಾಗೂ ರಕ್ಷಿತ್ ಶೆಟ್ಟಿಯೊಂದಿಗೆ ದೀರ್ಘಕಾಲದ ಬಾಂಧವ್ಯವನ್ನು ಸ್ಥಾಪಿಸಿರುವುದು, ‘ಗ್ಯಾಂಗ್’ ಅನ್ನೋ ಟ್ಯಾಗ್ಗೆ ಗೌರವ ತಂದಿದೆ. ‘ಸು ಫ್ರಮ್ ಸೋ’ ಸಿನಿಮಾ ಮಾತ್ರವಲ್ಲದೆ, ಈ ಸ್ನೇಹವೂ ಪ್ರೇಕ್ಷಕರಿಗೆ ಪ್ರೇರಣೆಯಾಗುತ್ತಿದೆ.