ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ವಿ. ಸೋಮಣ್ಣ, “ಆರ್‌ಸಿಬಿ ತಂಡದ ಜಯವನ್ನು ಕೇವಲ ಆಟದ ದೃಷ್ಟಿಯಿಂದ ನೋಡಿದರೆ ಸಾಕಾಗಲ್ಲ. ಅದು ರಾಜ್ಯದ ಗೌರವಕ್ಕೂ ಸಂಬಂಧಿಸಿದದ್ದು. ಕಾಲ್ತುಳಿತದಂತಹ ಘಟನೆಗೆ ಅವಕಾಶ ಮಾಡಿಕೊಟ್ಟು ಕರ್ನಾಟಕದ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದೀರಿ. ನೀವು ತೋರಿದ ನಡವಳಿಕೆ ಮರ್ಯಾದೆ ಹಾಳು ಮಾಡಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಬರುವ ಸಮಯದಲ್ಲಿ ಈ ರೀತಿಯ ತಪ್ಪುಗಳನ್ನು ಸರಿಪಡಿಸದೇ ಹೋದರೆ ಜನತೆಯೇ ಸೂಕ್ತ ಪಾಠ ಕಲಿಸುತ್ತಾರೆ ಎಂದು ಅವರು ಎಚ್ಚರಿಸಿದರು.
ಇತ್ತೀಚೆಗೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಬಿ. ದಯಾನಂದ್ ಅವರ ಅಮಾನತಿನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, “ದಯಾನಂದ್ ನೈತಿಕ ಹಾಗೂ ದಕ್ಷ ಪೊಲೀಸ್ ಅಧಿಕಾರಿ. ಅವರಿಗೆ ಶಿಕ್ಷೆ ನೀಡುವುದು ತಪ್ಪು. ಆ ಅಧಿಕಾರಿಯನ್ನು ರಾಜಕೀಯ ಪಟಾಲಂ ಪಾಪಕ್ಕೆ ಬಲಿಯಾಗಿಸಿರುವುದು ಅಪರಾಧ” ಎಂದು ತೀವ್ರವಾಗಿ ಟೀಕಿಸಿದರು.
ಇದೇ ಸಂದರ್ಭದಲ್ಲಿಯೇ, “ಇದೊಂದು ಹಳಿ ತಪ್ಪಿದ ಸರ್ಕಾರ. ಯಾವುದೇ ಸ್ಪಷ್ಟ ದಿಕ್ಕಿಲ್ಲದೇ ನಿರ್ಧಾರಗಳು ಕೈಗೆತ್ತಿಕೊಳ್ಳಲಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ ನೀಡಿದ ಫ್ರೀ ಹ್ಯಾಂಡ್ ಅವರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಅಧಿಕಾರಕ್ಕೆ ಜೋತು ಬೀಳದೆ ನೈತಿಕತೆಯಿಂದ ಹೊಣೆ ಹೊರಬೇಕು” ಎಂದು ಹೇಳಿದರು.