ಸ್ನೇಹಿತರ ನಡುವೆ ಬ್ಲೂಟೂತ್ ತಂದಿಟ್ಟ ಸಂಘರ್ಷ, ಕೊಲೆಯಲ್ಲಿ ಅಂತ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ನೇಹದ ಬಗ್ಗೆ ಅನೇಕ ಕಥೆಗಳನ್ನು ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ನಿಜವಾದ ಸ್ನೇಹಿತನಾದವನು ತನ್ನ ಸ್ನೇಹಿತ ಕಷ್ಟದಲ್ಲಿದ್ದಾಗ ಸಹಾಯ ಮಾಡುತ್ತಾನೆ. ಕೆಲವು ಸ್ನೇಹಿತರು ಭವಿಷ್ಯದ ಬಗ್ಗೆ ಯೋಚಿಸದೆ ತಮ್ಮ ಪ್ರಾಣವನ್ನು ಪಣಕ್ಕಿಡಲೂ ಹಿಂಜರಿಯುವುದಿಲ್ಲ. ಆದರೆ, ಸ್ನೇಹಿತರ, ಸ್ನೇಹದ ಹೆಸರಿಗೆ ಕಳಂಕ ತರುವ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಇಲ್ಲಿ ಗೆಳೆಯನೊಬ್ಬ ಸಣ್ಣ ಕಾರಣಕ್ಕೆ ತನ್ನ ಆತ್ಮೀಯ ಗೆಳೆಯನ ಉಸಿರನ್ನೇ ನಿಲ್ಲಿಸಿದ್ದಾನೆ.

ಬ್ಲೂಟೂತ್ ನಲ್ಲಿ ಸಂಗೀತ ಕೇಳುವ ವಿಚಾರದಲ್ಲಿ ನಡೆದ ಸಣ್ಣ ಜಗಳ ಒಬ್ಬರ ಪ್ರಾಣ ಕಳೆದುಕೊಂಡಿರುವ ಘಟನೆ ಜಾರ್ಖಂಡ್‌ನ ಸಿಮ್ಡೆಗಾ ಜಿಲ್ಲೆಯಲ್ಲಿ ನಡೆದಿದೆ. ಸಿಮ್ಡೆಗಾ ಜಿಲ್ಲೆಯ ಬಾನೋ ಬ್ಲಾಕ್‌ನ ಮಹಾಬುವಾಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಬೇಡರಗಿ ಗ್ರಾಮದ 14 ವರ್ಷದ ಪೂನಾ ಕಂಡೂಲನ್ ಅದೇ ಗ್ರಾಮದ 19 ವರ್ಷದ ಅಜಯ್ ಸಿಂಗ್ ಇಬ್ಬರೂ ಒಳ್ಳೆಯ ಸ್ನೇಹಿತರು. ಇವರಿಬ್ಬರ ಗೆಳೆತನ ಹಳ್ಳಿಯಲ್ಲಿ ಎಲ್ಲರಿಗೂ ಗೊತ್ತಿದ್ದು, ಇವರಿಬ್ಬರ ಗೆಳೆತನವನ್ನೇ ಉದಾಹರಣೆಯಾಗಿ ಹೇಳುತ್ತಿರುತ್ತಾರೆ. ಅಂತವರ ನಡುವೆ ಬ್ಲೂಟೂತ್‌ನಲ್ಲಿ ತಮ್ಮ ನೆಚ್ಚಿನ ಹಾಡನ್ನು ಕೇಳಲು ಜಗಳ ಶುರುವಾಗಿದೆ.

ಇದರಿಂದ ಕುಪಿತಗೊಂಡ ಅಜಯ್ ಹಾಕಿ ಸ್ಟಿಕ್ ನಿಂದ ಪೂನಾ ತಲೆಗೆ ಹೊಡೆದಿದ್ದಾನೆ. ತಲೆಗೆ ತೀವ್ರವಾದ ಗಾಯಗಳಿಂದಾಗಿ, 14 ವರ್ಷದ ಪೂನಾ ಪ್ರಜ್ಞೆ ಕಳೆದುಕೊಂಡು ಸಾವನ್ನಪ್ಪಿದರು. ಬಳಿಕ ಅಜಯ್‌, ಮೃತ ದೇಹವನ್ನು ಸೇತುವೆಯ ಕೆಳಗೆ ಎಸೆದು ಯಾರಿಗೂ ಕಾಣದಂತೆ ಎಲೆಗಳಿಂದ ಮುಚ್ಚುತ್ತಾನೆ. ಸಾಲದ್ದಕ್ಕೆ ಅಜಯ್ ಸಿಂಗ್ ಮನೆಗೆ ತೆರಳಿ ಹರಿತವಾದ ಆಯುಧ ತಂದು ಪೂನಾ ಅವರ ಮುಖ ಮತ್ತು ದೇಹ ಗುರುತು ಸಿಗದಂತೆ ಹಲವು ಬಾರಿ ಇರಿದಿದ್ದಾನೆ.

ಮೃತದೇಹವನ್ನು ಅಲ್ಲಿಯೇ ಎಸೆದ ನಂತರ ಆ ಪ್ರದೇಶದಿಂದ ದುರ್ವಾಸನೆ ಬರುತ್ತಿದ್ದಂತೆ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಳೆತ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ನಂತರ, ಮೃತ ದೇಹವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಇದರಿಂದ ಪೂನಾದ ಸ್ನೇಹಿತ ಅಜಯ್ ಸಿಂಗ್ ನನ್ನು ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಅಜಯ್ ತನ್ನ ಸ್ನೇಹಿತನನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರು ಆತನನ್ನು ಬಂಧಿಸಿ ರಿಮಾಂಡ್‌ಗೆ ಕಳುಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!