March 12, 2026
Thursday, March 12, 2026
spot_img

ಸಾಧನೆಯ ಶಿಖರಕ್ಕೇರಿದ ಗಂಗಾವತಿಯ ಯುವ ಪ್ರತಿಭೆ: ಮೊದಲ ಪ್ರಯತ್ನದಲ್ಲೇ ಸಿವಿಲ್ ಜಡ್ಜ್ ಆಗಿ ಆಯ್ಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ಲು ಗ್ರಾಮದ ಹೆಮ್ಮೆಯ ಪುತ್ರ ಸಂತೋಷ್ ಬಸವರಾಜ್ ಬೆಳಗೋಡ್ ಅವರು ಕರ್ನಾಟಕ ಉಚ್ಚ ನ್ಯಾಯಾಲಯ ನಡೆಸಿದ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ತಮ್ಮ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಸಂತೋಷ್ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗಂಗಾವತಿಯ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಪೂರೈಸಿದರು. ನಂತರ ಮಂಡ್ಯದ ಶ್ರೀ ಸತ್ಯಸಾಯಿ ಶಾರದಾನಿಕೇತನಂನಲ್ಲಿ ಪ್ರೌಢ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಲೋಕಸೇವಾ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿದರು. ಈ ಸಂಸ್ಥೆಗಳ ಶಿಸ್ತು ಮತ್ತು ಮೌಲ್ಯಾಧಾರಿತ ಶಿಕ್ಷಣವೇ ಅವರ ಇಂದಿನ ಸಾಧನೆಗೆ ಬುನಾದಿಯಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಬಿಎಂಎಸ್ ಕಾನೂನು ಮಹಾವಿದ್ಯಾಲಯದಲ್ಲಿ ಐದು ವರ್ಷಗಳ ಕಾನೂನು ಪದವಿ (LLB) ಪೂರೈಸಿದ ಇವರು, 2023ರಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡು ಬೆಂಗಳೂರಿನ ವಿವಿಧ ನ್ಯಾಯಾಲಯಗಳಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದರು.

ಫೆಬ್ರವರಿ 10, 2025 ರಂದು ಕರ್ನಾಟಕ ಉಚ್ಚ ನ್ಯಾಯಾಲಯ ಪ್ರಕಟಿಸಿದ ಅಧಿಸೂಚನೆಯಂತೆ ನಡೆದ ಪೂರ್ವಭಾವಿ, ಮುಖ್ಯ ಪರೀಕ್ಷೆ ಹಾಗೂ ಇತ್ತೀಚೆಗೆ (ಜನವರಿ) ನಡೆದ ಸಂದರ್ಶನದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸಂತೋಷ್ ಅವರು ಸಿವಿಲ್ ನ್ಯಾಯಾಧೀಶರ ಹುದ್ದೆಯನ್ನು ಅಲಂಕರಿಸಲು ಸಜ್ಜಾಗಿದ್ದಾರೆ.

ಕೇವಲ ಓದಿನಲ್ಲಿ ಮಾತ್ರವಲ್ಲದೆ, ಕಾಲೇಜು ದಿನಗಳಲ್ಲಿ ರಾಜ್ಯಮಟ್ಟದ ಅಣುಕು ನ್ಯಾಯಾಲಯ ಮತ್ತು ಮಾದರಿ ವಿಧಾನಸಭಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿಜೇತರಾಗುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಇವರ ಈ ಸಾಧನೆಗೆ ಗ್ರಾಮಸ್ಥರು ಹಾಗೂ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !