ಹೊಸದಿಗಂತ ವರದಿ ಪುತ್ತೂರು:
ತಲೆನೋವು, ನರದೋಷ ಮತ್ತಿತರ ಸಮಸ್ಯೆಯಿಂದ ಬಳಲುತ್ತಿದ್ದು ಮಾನಸಿಕವಾಗಿ ಜರ್ಝರಿತಗೊಂಡಿದ್ದ ಯುವತಿಯೊಬ್ಬಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನ.23ರಂದು ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಪೊಯ್ಯೊಲೆ ಎಂಬಲ್ಲಿ ನಡೆದಿದೆ.
ಗುಡ್ಡಪ್ಪ ರೈ ಎಂಬವರ ಪುತ್ರಿ ನೀತಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈ ಬಗ್ಗೆ ಮೃತಳ ಅಕ್ಕ ಗೀತಾ ಪಿ. ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗುಡ್ಡಪ್ಪ ರೈ ಅವರು 20 ವರ್ಷಗಳ ಹಿಂದೆ ಕುಟುಂಬದಿಂದ ದೂರವಾಗಿದ್ದು, ಅವರ ಪತ್ನಿ ಸುಮತಿ ಮಕ್ಕಳಾದ ಗೀತಾ ಮತ್ತು ನೀತಾ ಅವರೊಂದಿಗೆ ವಾಸವಾಗಿದ್ದರು. ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ನೀತಾ 2016ರ ನಂತರ ತಲೆನೋವು, ಕುತ್ತಿಗೆ, ಬೆನ್ನುಹುರಿ ನೋವು, ನರ ಸಮಸ್ಯೆ ಕಾಣಿಸಿಕೊಂಡ ಕಾರಣ ಕೆಲಸ ಬಿಟ್ಟು ಮನೆಯಲ್ಲಿದ್ದರು.
ಔಷಧೋಪಚಾರ ನಡೆಯುತ್ತಿತ್ತು. ಮನೆಯ ಆಸುಪಾಸಿನಲ್ಲಿ ನಡೆದಾಡುತ್ತಿದ್ದ ನೀತಾ ನ.23ರಂದು ಮನೆಯಲ್ಲಿ ಒಬ್ಬಂಟಿಯಾಗಿದ್ದರು. ಅಕ್ಕ ಗೀತಾ ಬೆಳಗ್ಗೆ ಮಂಗಳೂರಿಗೆ ತಂಗಿಗೆ ಔಷಧಿ ತರಲು ಹೋಗಿದ್ದರು. ತಾಯಿ ಕಾರ್ಯನಿಮಿತ್ತ ಹೊರ ಹೋಗಿದ್ದರು. ನೀತಾ ಮನೆಯಲ್ಲಿ ಒಂಟಿಯಾಗಿದ್ದರು. ಮದ್ಯಾಹ್ನ 12.30 ಗಂಟೆಯಿಂದ ಸಂಜೆ 6.30 ಗಂಟೆಯ ನಡುವೆ ಯಾರೂ ಇಲ್ಲದ ಸಮಯ ಕಿಟಕಿಗೆ ಶಾಲಿನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

