June 29, 2026
Monday, June 29, 2026
spot_img

ವೈದ್ಯರ ಬದಲು ಯೂಟ್ಯೂಬ್ ಮಾಹಿತಿಗೆ ಮೊರೆ: ಮನೆಯಲ್ಲೇ ಹೆರಿಗೆ ಯತ್ನಿಸಿ ಯುವತಿ ದಾರುಣ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:


ಯೂಟ್ಯೂಬ್‌ನಲ್ಲಿ ಲಭ್ಯವಿದ್ದ ವಿಡಿಯೋಗಳನ್ನು ನೋಡಿ ಮನೆಯಲ್ಲೇ ಹೆರಿಗೆ ಮಾಡಲು ಯತ್ನಿಸಿದ್ದ ಯುವತಿಯೊಬ್ಬರು ತೀವ್ರ ಪ್ರಸವಾನಂತರದ ರಕ್ತಸ್ರಾವದಿಂದ ಮೃತಪಟ್ಟಿರುವ ದುರ್ಘಟನೆ ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಉತ್ತುಕುಳಿ ಸಮೀಪದ ತಲವೈಪಾಳಯಂನಲ್ಲಿ ನಡೆದಿದೆ.


ಮಹಿಳೆ ಜೂನ್ 25ರಂದು ಅವರು ಮನೆಯಲ್ಲಿ ಹೆರಿಗೆ ಮಾಡಲು ಪ್ರಯತ್ನಿಸಿದ ವೇಳೆ ಹೆರಿಗೆ ಸಮಸ್ಯೆಯಾಗಿದ್ದು, ಬಳಿಕ ತೀವ್ರ ರಕ್ತಸ್ರಾವ ಉಂಟಾಗಿದೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಅವರನ್ನು ಪೆರುಂಡುರೈನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗೆ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆಸ್ಪತ್ರೆಯಲ್ಲಿ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ನವಜಾತ ಶಿಶುವನ್ನು ವಿಶೇಷ ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ, ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ,ಮಹಿಳೆಯ ಮೊದಲ ಹೆರಿಗೆ ಸಿಸೇರಿಯನ್ (ಸಿ-ಸೆಕ್ಷನ್) ಮೂಲಕ ನಡೆದಿತ್ತು. ಎರಡನೇ ಮಗುವನ್ನು ಸಹಜ ಹೆರಿಗೆಯ ಮೂಲಕ ಪಡೆಯಬೇಕೆಂಬ ಉದ್ದೇಶದಿಂದ ಆಸ್ಪತ್ರೆಯ ವೈದ್ಯಕೀಯ ಮೇಲ್ವಿಚಾರಣೆಯನ್ನು ಬಿಟ್ಟು ಮನೆಯಲ್ಲೇ ಹೆರಿಗೆ ಮಾಡಲು ಪತಿ ಹಾಗೂ ಅತ್ತೆ ನಿರ್ಧರಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ತನಿಖೆಯಲ್ಲಿ, ಯೂಟ್ಯೂಬ್ ವಿಡಿಯೋಗಳನ್ನು ಆಧರಿಸಿ ಮನೆಯಲ್ಲೇ ಹೆರಿಗೆ ನಡೆಸಲು ಪ್ರಯತ್ನಿಸಿದ್ದ ವಿಚಾರ ಬೆಳಕಿಗೆ ಬಂದಿದೆ. ಹೆರಿಗೆಯ ವೇಳೆ ತೀವ್ರ ಪ್ರಸವಾನಂತರದ ರಕ್ತಸ್ರಾವ ಉಂಟಾಗಿ, ಅದೇ ಸಾವಿಗೆ ಕಾರಣವಾಗಿದೆ ಎಂದು ವೈದ್ಯರು ಪ್ರಾಥಮಿಕವಾಗಿ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !