ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿದ್ದು,ಇದರ ಭಾಗವಾಗಿ 22ನೇ ಭಾರತೀಯ ಕಾನೂನು ಆಯೋಗವು ಜನರಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.
ದೇಶದ ನಾಗರಿಕರು, ಪ್ರಮುಖ ಧಾರ್ಮಿಕ ಸಂಸ್ಥೆಗಳು ಏಕರೂಪ ನಾಗರಿಕ ಸಂಹಿತೆ ಕುರಿತು 30 ದಿನಗಳಲ್ಲಿ ಅಭಿಪ್ರಾಯ ಸಲ್ಲಿಸಬೇಕು ಎಂದು ಕಾನೂನು ಆಯೋಗ ಸೂಚಿಸಿದೆ.
ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿಯೇ ಸಿದ್ಧ ಎಂದು ಹೇಳಿದ್ದಾರೆ. ಇದೀಗ ಕಾನೂನು ಆಯೋಗವು ಸಾರ್ವಜನಿಕರಿಂದ, ಧಾರ್ಮಿಕ ಸಂಸ್ಥೆಗಳಿಂದ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.
ಇಲ್ಲಿ ಅಭಿಪ್ರಾಯ ತಿಳಿಸಿ:
ಏಕರೂಪ ನಾಗರಿಕ ಸಂಹಿತೆ ಜಾರಿ ಕುರಿತು ಸಾಮಾನ್ಯ ಜನರು ಕೂಡ ಸಂಹಿತೆ ಜಾರಿ ಕುರಿತಂತೆ ಅಭಿಪ್ರಾಯ ಸಲ್ಲಿಸಬಹುದಾಗಿದೆ. ಭಾರತೀಯ ಕಾನೂನು ಆಯೋಗದ [email protected]ಗೆ ಇ-ಮೇಲ್ ಮಾಡುವ ಮೂಲಕ ನಿಮ್ಮ ಅಭಿಪ್ರಾಯವನ್ನೂ ದಾಖಲಿಸಬಹುದು. ಅಂದಹಾಗೆ, ನೀವು ಅಭಿಪ್ರಾಯ ತಿಳಿಸಲು 30 ದಿನ ಮಾತ್ರ ಕಾಲಾವಕಾಶವಿದೆ. ಅಧಿಸೂಚನೆ ಹೊರಡಿಸಲಾದ 30 ದಿನಗಳೊಳಗೆ ಅಭಿಪ್ರಾಯ ಸಲ್ಲಿಸಬಹುದು.
ಏಕರೂಪ ನಾಗರಿಕ ಸಂಹಿತೆ:
ಜಾತಿ, ಧರ್ಮ, ಪಂಥಗಳ ಭೇದ-ಭಾವ ಇಲ್ಲದೆ, ದೇಶದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂಬುದೇ ಏಕರೂಪ ನಾಗರಿಕ ಸಂಹಿತೆಯಾಗಿದೆ. ಸಂವಿಧಾನದ 44ನೇ ವಿಧಿಯು ಕೂಡ ಏಕರೂಪ ನಾಗರಿಕ ಸಂಹಿತೆ ಇರಬೇಕು ಎಂದು ಹೇಳುತ್ತದೆ. ಹಾಗಾಗಿ, ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದು 2019ರಲ್ಲಿಯೇ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದರೆ, ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದರೆ ಮುಸ್ಲಿಮರಲ್ಲಿರುವ ಬಹುಪತ್ನಿತ್ವದಂತಹ ಪದ್ಧತಿಗಳು ಕೊನೆಗೊಳ್ಳುತ್ತವೆ. ಎಲ್ಲರಿಗೂ ಒಂದೇ ಕಾನೂನು ಜಾರಿಗೆ ಬರುತ್ತದೆ. ಇದಕ್ಕಾಗಿ, ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಬಾರದು ಎಂದು ಹಲವು ಧಾರ್ಮಿಕ ಸಂಸ್ಥೆಗಳು, ರಾಜಕಾರಣಿಗಳ ಒತ್ತಾಯವಾಗಿದೆ.