ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸಲು, ದೇಶದ ಯುವ ಸಮುದಾಯ ಮುಂದಾಗಬೇಕು. ಅಮೃತ ಕಾಲದಲ್ಲಿ ದೇಶದ ಏಳಿಗೆಗೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಕಿವಿಮಾತು ಹೇಳಿದ್ದಾರೆ.
ನಗರದಲ್ಲಿ ನಡೆದ ಐಐಟಿ ಮದ್ರಾಸ್‌ನ ಸಂಗಮ್–2025 ಜಾಗತಿಕ ಅನ್ವೇಷಣೆ ಮತ್ತು ಹಳೆಯ ವಿದ್ಯಾರ್ಥಿಗಳ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಅವರು, ಪ್ರಧಾನಿ ನರೇಂದ್ರ ಮೋದಿಯವರು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ರೂಪಿಸುವ ದೃಷ್ಟಿಕೋನವನ್ನು ಹೊಂದಿದ್ದಾರೆ. ಈ ದೃಷ್ಟಿಕೋನವನ್ನು ಸಾಧಿಸಲು ಯುವಕರು ತಮ್ಮ ಶಕ್ತಿ, ಶ್ರದ್ಧೆ ಮತ್ತು ಸಾಂಸ್ಕೃತಿಕ ಬಲದಿಂದ ದೇಶದ ಅಭಿವೃದ್ಧಿಗೆ ಪಾಲುದಾರರಾಗಬೇಕು ಎಂದು ಹೇಳಿದರು.
ಹತ್ತು ವರ್ಷಗಳ ಹಿಂದೆ ಹಿಂದುಳಿದ ಆರ್ಥಿಕತೆಗಳಲ್ಲಿ ಭಾರತವಿತ್ತು. ಆದರೆ ಕಳೆದ 11 ವರ್ಷಗಳಲ್ಲಿ ಪ್ರಧಾನ ಮಂತ್ರಿಯವರ ನೇತೃತ್ವದಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳ ಮೂಲಕ ದೇಶ ಈ ತಡೆಗೋಡೆಯನ್ನು ದಾಟಿದೆ. ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ, ಜಲ್ ಜೀವನ್ ಮಿಷನ್ ಮುಂತಾದ ಯೋಜನೆಗಳು ಒಂದು ಹಾರದಲ್ಲಿನ ಮುತ್ತುಗಳಂತೆ ಪರಸ್ಪರ ಸಂಬಂಧ ಹೊಂದಿವೆ. ಒಂದು ಯೋಜನೆಯ ಕೊರತೆಯು ಇಡೀ ಅಭಿಯಾನವನ್ನು ದುರ್ಬಲಗೊಳಿಸಬಹುದು ಎಂದು ಅವರು ವಿವರಿಸಿದರು.
ಭಾರತದ ಆರ್ಥಿಕ ಸ್ಥಿತಿಗತಿ ಕುರಿತು ಮಾತನಾಡಿದ ಗೋಯಲ್, ಒಮ್ಮೆ ವಿಶ್ವದ 11ನೇ ಅತಿದೊಡ್ಡ ಆರ್ಥಿಕತೆ ಹೊಂದಿದ್ದ ಭಾರತ ಇಂದು ಐದನೇ ಸ್ಥಾನಕ್ಕೆ ಏರಿದೆ. ಈ ವರ್ಷಾಂತ್ಯದೊಳಗೆ 4ನೇ ಸ್ಥಾನ ಮತ್ತು 2027ರೊಳಗೆ 3ನೇ ಅತಿದೊಡ್ಡ ಆರ್ಥಿಕತೆಗೆ ತಲುಪಲು ಸಾಧ್ಯವಾಗುತ್ತದೆ. ಇದಕ್ಕಾಗಿ ಆಳವಾದ ತಂತ್ರಜ್ಞಾನ ಆಧಾರಿತ ಪರಿಸರ ವ್ಯವಸ್ಥೆ ನಿರ್ಮಾಣಕ್ಕೆ 10,000 ಕೋಟಿ ರೂ. ಹಂಚಿಕೆ ಮಾಡಲಾಗಿತ್ತು. ಈಗ ಮತ್ತಷ್ಟು ನವೀನತೆಯನ್ನು ಬೆಂಬಲಿಸಲು ಹೆಚ್ಚುವರಿಯಾಗಿ 10,000 ಕೋಟಿ ರೂ. ಮಂಜೂರು ಮಾಡಲಾಗಿದೆ ಎಂದು ಹೇಳಿದರು.
ಯುವಕರು ದೇಶದ ಅಭಿವೃದ್ಧಿ ಪಯಣದಲ್ಲಿ ಮುಂಚೂಣಿಗೆ ಬಂದು ನವಚಿಂತನ, ತಂತ್ರಜ್ಞಾನ, ಉದ್ಯಮಶೀಲತೆ ಮೂಲಕ ಭಾರತವನ್ನು ವಿಶ್ವದ ನಾಯಕತ್ವದ ಹಾದಿಗೆ ಕೊಂಡೊಯ್ಯಬೇಕಾಗಿದೆ ಎಂದು ಅವರು ಮನವಿ ಮಾಡಿದರು.