January22, 2026
Thursday, January 22, 2026
spot_img

RJD-ಕಾಂಗ್ರೆಸ್‌ಗೆ ಮಕಾಡೆ ಮಲಗಿಸಿದ ‘ಯುವ ಚಿರಾಗ್’: ಬಿಹಾರ ಡಿಸಿಎಂ ಪಟ್ಟಕ್ಕೆ ಜಯಭೇರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನಕ್ಕೆ ಕುಸಿದ್ದಿದ್ದ ಲೋಕ ಜನಶಕ್ತಿ ಪಕ್ಷ (LJP), ಯುವ ನಾಯಕ ಚಿರಾಗ್ ಪಾಸ್ವಾನ್ ಅವರ ನೇತೃತ್ವದಲ್ಲಿ ಈ ಬಾರಿ ಇತಿಹಾಸ ನಿರ್ಮಿಸಿದೆ. ಎಲ್‌ಜೆಪಿ ಸ್ಪರ್ಧಿಸಿದ್ದ 29 ಕ್ಷೇತ್ರಗಳ ಪೈಕಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಈ ಅನಿರೀಕ್ಷಿತ ಮತ್ತು ಅತ್ಯುತ್ತಮ ಪ್ರದರ್ಶನವು ಬಿಹಾರದ ರಾಜಕೀಯ ಸಮೀಕರಣವನ್ನೇ ಬದಲಿಸಿದ್ದು, ಮುಖ್ಯ ವಿರೋಧ ಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ಮಕಾಡೆ ಮಲಗುವಂತೆ ಮಾಡಿದೆ.

ಡಿಸಿಎಂ ಪಟ್ಟದ ಚರ್ಚೆ

ಚಿರಾಗ್ ಪಾಸ್ವಾನ್ ಅವರ ಈ ಭರ್ಜರಿ ಸಾಧನೆಯ ಹಿನ್ನೆಲೆಯಲ್ಲಿ, ಅವರು ಬಿಹಾರದ ಉಪ ಮುಖ್ಯಮಂತ್ರಿ (ಡಿಸಿಎಂ) ಸ್ಥಾನವನ್ನು ಅಲಂಕರಿಸುತ್ತಾರಾ ಎಂಬ ಬಿಸಿ ಚರ್ಚೆ ರಾಜಕೀಯ ವಲಯದಲ್ಲಿ ಪ್ರಾರಂಭವಾಗಿದೆ. ತಮ್ಮ ಪಕ್ಷವನ್ನು ಕಷ್ಟದ ಪರಿಸ್ಥಿತಿಯಿಂದ ಹೊರತಂದು ಉತ್ತುಂಗಕ್ಕೆ ತಂದಿರುವ ಚಿರಾಗ್ ಅವರ ಪಾತ್ರವು ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಅಪ್ಪನ ದಾಖಲೆ ಮೀರಿಸಿದ ಮಗ

ಈ ಹಿಂದೆ, ರಾಮ್ ವಿಲಾಸ್ ಪಾಸ್ವಾನ್ ಅವರು ಪಕ್ಷವನ್ನು ಮುನ್ನಡೆಸುತ್ತಿದ್ದಾಗ, 2005ರ ಚುನಾವಣೆಯಲ್ಲಿ 180 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 29 ಸ್ಥಾನಗಳನ್ನು ಗೆದ್ದಿದ್ದರು. ಆದರೆ, ಚಿರಾಗ್ ಪಾಸ್ವಾನ್ ಅವರು ಈ ಬಾರಿ ಕಡಿಮೆ ಕ್ಷೇತ್ರಗಳಲ್ಲಿ (29) ಸ್ಪರ್ಧಿಸಿ, ಅದರಲ್ಲಿ ಬಹುಪಾಲು (20+) ಸ್ಥಾನಗಳಲ್ಲಿ ಜಯಗಳಿಸುವ ಮೂಲಕ, ತಮ್ಮ ತಂದೆಯ ಹಳೆಯ ದಾಖಲೆಗಿಂತಲೂ ಉತ್ತಮವಾದ ಶೇಕಡಾವಾರು ಸಾಧನೆಯನ್ನು ಮಾಡಿದ್ದಾರೆ.

2020ರ ಸೋಲು, 2024ರ ಪುನರ್ಜನ್ಮ

2020ರ ಚುನಾವಣೆಯಲ್ಲಿ ಎಲ್‌ಜೆಪಿ, ನಿತೀಶ್ ಕುಮಾರ್ ಅವರ ಜೆಡಿಯು ಜೊತೆಗಿನ ಸಂಬಂಧ ಕಡಿದುಕೊಂಡು ಏಕಾಂಗಿಯಾಗಿ ಸ್ಪರ್ಧಿಸಿತ್ತು. ಆಗ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದಿಂದ ಯಾವುದೇ ಅನುಕಂಪದ ಅಲೆಯು ಕೆಲಸ ಮಾಡಿರಲಿಲ್ಲ, ಕೇವಲ 1 ಸ್ಥಾನದಲ್ಲಿ ಜಯಗಳಿಸಿ ಪಕ್ಷ ಹೀನಾಯ ಸೋಲು ಕಂಡಿತ್ತು. ಇದಾದ ಒಂದು ವರ್ಷದೊಳಗೆ, ರಾಮ್ ವಿಲಾಸ್ ಅವರ ಸಹೋದರ ಪಶುಪತಿ ಕುಮಾರ್ ಪರಸ್ ಅವರು ಪಕ್ಷವನ್ನು ಒಡೆದಿದ್ದರಿಂದ, ಚಿರಾಗ್ ಅವರ ರಾಜಕೀಯ ಜೀವನ ಅಂತ್ಯವಾಯಿತು ಎಂಬ ಮಾತುಗಳು ಕೇಳಿಬಂದಿದ್ದವು.

ಆದರೆ, ಚಿರಾಗ್ ಪಾಸ್ವಾನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ರಾಜಕೀಯ ತಂತ್ರದ ಮೂಲಕ 2024ರ ಲೋಕಸಭಾ ಚುನಾವಣೆಗೆ ಮರಳಿ ಎನ್‌ಡಿಎ ಮೈತ್ರಿಕೂಟ ಸೇರಿದರು. ಲೋಕಸಭೆಯಲ್ಲಿ ಸ್ಪರ್ಧಿಸಿದ್ದ ಐದೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಚಿರಾಗ್ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.

ಮೈತ್ರಿಯ ಲಾಭ: ಜೆಡಿಯುಗೆ ಸಿಕ್ತು ಜೀವದಾನ

ಈ ಬಾರಿ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಸೀಟು ಹಂಚಿಕೆಗೆ ಕೊನೆಯವರೆಗೂ ಗುದ್ದಾಡಿದ್ದ ಚಿರಾಗ್ ಪಾಸ್ವಾನ್, ಅಂತಿಮವಾಗಿ 29 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಎಲ್‌ಜೆಪಿ ಮೈತ್ರಿಕೂಟಕ್ಕೆ ಸೇರಿದ್ದು, ಬಿಜೆಪಿ ಮತ್ತು ಜೆಡಿಯು ಎರಡಕ್ಕೂ ಲಾಭ ತಂದಿದೆ. ಅದರಲ್ಲೂ ಮುಖ್ಯವಾಗಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷಕ್ಕೆ ಹೆಚ್ಚಿನ ಪ್ರಯೋಜನವಾಗಿದೆ.

2020ರ ಚುನಾವಣೆಯಲ್ಲಿ ಎಲ್‌ಜೆಪಿ 135 ಸ್ಥಾನಗಳಲ್ಲಿ ಸ್ಪರ್ಧಿಸಿ ಜೆಡಿಯುಗೆ ದೊಡ್ಡ ಹಾನಿ ಉಂಟುಮಾಡಿತ್ತು, ಇದರಿಂದ ಜೆಡಿಯು 34 ಕ್ಷೇತ್ರಗಳಲ್ಲಿ ಸೋಲು ಕಂಡಿತ್ತು. ಆದರೆ ಈ ಬಾರಿ ಚಿರಾಗ್ ಪಾಸ್ವಾನ್ ಅವರ ಮೈತ್ರಿಯಿಂದಾಗಿ, ಜೆಡಿಯು 21 ಕ್ಷೇತ್ರಗಳಲ್ಲಿ ಸುಲಭವಾಗಿ ಜಯಗಳಿಸಲು ಸಾಧ್ಯವಾಗಿದೆ.

Must Read