ವಿಚ್ಛೇದನದ ಬಳಿಕ ಆತ್ಮಹತ್ಯೆಯ ಆಲೋಚನೆ ಬಂದಿತ್ತು: ಮನಬಿಚ್ಚಿ ಮಾತನಾಡಿದ ಯುಜ್ವೇಂದ್ರ ಚಾಹಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಕ್ರಿಕೆಟ್ ತಂಡದ ತಾರೆ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ತಮ್ಮ ವೈಯಕ್ತಿಕ ಜೀವನದ ನೋವಿನ ಕ್ಷಣಗಳ ಬಗ್ಗೆ ಓಪನ್ ಅಪ್ ಆಗಿದ್ದಾರೆ. ಪತ್ನಿ ಧನಶ್ರೀ ವರ್ಮಾ ಅವರಿಂದ ವಿಚ್ಛೇದನವಾದ ಬಳಿಕ ತೀವ್ರ ಖಿನ್ನತೆಗೆ ಒಳಗಾಗಿದ್ದೆನೆಂದು, ಅಲ್ಲದೇ ಆತ್ಮಹತ್ಯೆಯ ಬಗ್ಗೆ ಯೋಚಿಸಿದ್ದೆ ಎಂಬ ಆಘಾತಕಾರಿ ವಿಚಾರವನ್ನು ಅವರು ಬಹಿರಂಗಪಡಿಸಿದ್ದಾರೆ.

ರಾಜ್ ಶಮ್ನಿ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಚಾಹಲ್, “ವಿಚ್ಛೇದನದ ನಂತರ ನಾನು ‘ವಂಚಕ’ ಎಂಬ ಹಣೆಪಟ್ಟಿ ಹೊರುವಂತಾಯ್ತು. ನನಗೆ ಹೆಚ್ಚು ನೋವಾಗಿದ್ದದ್ದು ಜನರು ಸಂಪೂರ್ಣ ಸತ್ಯವನ್ನು ತಿಳಿಯದೇ ನನ್ನ ಬಗ್ಗೆ ತೀರ್ಮಾನಿಸುವುದು. ನಾನು ಜೀವನದಲ್ಲಿ ಯಾರಿಗೂ ಮೋಸ ಮಾಡಿಲ್ಲ. ನಾನು ನಿಷ್ಠಾವಂತ ವ್ಯಕ್ತಿ. ನನ್ನಂತಹ ನಿಷ್ಠಾವಂತ ವ್ಯಕ್ತಿಯನ್ನು ನೋಡಲು ಕಷ್ಟ,” ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡರು.

ವಿಚ್ಛೇದನಕ್ಕೆ ಕಾರಣ ತಿಳಿಸುತ್ತಾ, “ನಾವು ಒಟ್ಟಿಗೆ ಉತ್ತಮ ಸಮಯ ಕಳೆಯಲು ಸಾಧ್ಯವಾಗಲಿಲ್ಲ. ವೃತ್ತಿಜೀವನದ ಬ್ಯುಸಿಯು ನಮ್ಮ ನಡುವಿನ ಅಂತರ ಹೆಚ್ಚಿಸಿತು. ಎಲ್ಲವನ್ನೂ ಉಳಿಸಿಕೊಳ್ಳಲು ಎರಡೂ ಕಡೆಯಿಂದ ಸಹಕಾರ ಅಗತ್ಯವಿತ್ತು, ಆದರೆ ಭಿನ್ನಾಭಿಪ್ರಾಯಗಳಿಂದಾಗಿ ಎಲ್ಲವೂ ಹಾಳಾಯಿತು” ಎಂದು ಹೇಳಿದ್ದಾರೆ.

ಚಾಹಲ್ ಮುಂದುವರೆದು, “ನಾನು ನಾಲ್ಕೈದು ತಿಂಗಳುಗಳಿಂದ ತುಂಬಾ ಖಿನ್ನತೆಯಲ್ಲಿದ್ದೆ. ನನ್ನ ಮೆದುಳು ಕೆಲಸ ಮಾಡುವುದನ್ನೇ ನಿಲ್ಲಿಸಿತ್ತು. ಕಣ್ಣುಗಳಲ್ಲಿ ಕತ್ತಲೆ ಆವರಿಸುತ್ತಿತ್ತು. ನನಗೆ ತುಂಬಾ ಆತಂಕವಾಗುತ್ತಿತ್ತು. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಯೋಚನೆಯೂ ಬಂದಿತ್ತು. ಈ ವಿಷಯವನ್ನು ಕೆಲವೇ ಜನರೊಂದಿಗೆ ಹಂಚಿಕೊಂಡಿದ್ದೆ,” ಎಂದು ತಮ್ಮ ಆಂತರಿಕ ತೊಂದರೆಗಳನ್ನು ಉಲ್ಲೇಖಿಸಿದ್ದಾರೆ.

“ನಿಮ್ಮ ಬಳಿ ಎಲ್ಲಾ ಸೌಲಭ್ಯಗಳಿದ್ದರೂ ಸಂತೋಷವಿಲ್ಲದಿದ್ದರೆ ಜೀವನದ ಅರ್ಥವೇ ಇಲ್ಲ. ನಾನು ಬಹುತೇಕ ಖಾಲಿತನವನ್ನು ಅನುಭವಿಸುತ್ತಿದ್ದೆ. ಸಾಮಾಜಿಕ ಮಾಧ್ಯಮದಲ್ಲಿ ಜನರು ತಮ್ಮ ಮನಬಂದಂತೆ ಬರೆಯುತ್ತಾರೆ, ಅದು ತುಂಬಾ ನೋವುಂಟುಮಾಡುತ್ತದೆ” ಎಂದು ಅವರು ತಮ್ಮ ನೋವನ್ನು ವ್ಯಕ್ತಪಡಿಸಿದರು.

ವೈಯಕ್ತಿಕ ಬದುಕಿನಲ್ಲಿ ಎದುರಿಸಿದ ಸಂಕಷ್ಟಗಳ ನಡುವೆಯೂ ಚಾಹಲ್ ಅವರ ಪ್ರಾಮಾಣಿಕತೆ ಹಾಗೂ ಸ್ಪಷ್ಟತೆ ಕ್ರಿಕೆಟ್ ಲೋಕದಲ್ಲಿ ಹಾಗೂ ಅಭಿಮಾನಿಗಳಲ್ಲಿ ಭಾರೀ ಪ್ರತಿಕ್ರಿಯೆ ಮೂಡಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!