ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರುತಿಯ ಮಹತ್ವಾಕಾಂಕ್ಷೆಯ ಎಸ್-ಕ್ರಾಸ್ (S-Cross) ಎಸ್ಯುವಿ (SUV) ಗ್ರಾಹಕರನ್ನು ತಲುಪುವಲ್ಲಿ ವಿಫಲವಾಗಿದೆ. ಹೀಗಾಗಿ ಮಾರುತಿ ಸುಜುಕಿ ತನ್ನ ಅಧಿಕೃತ ವೆಬ್‌ಸೈಟ್‌ನಿಂದಲೂ ಎಸ್-ಕ್ರಾಸ್ ಅನ್ನು ತೆಗೆದು ಹಾಕಿದೆ. ಈ ಮೂಲಕ ಹೊಸದಾಗಿ ಬಿಡುಗಡೆಯಾದ ಮಾರುತಿ ಸುಜುಕಿ ಗ್ರಾಂಡ್ ವಿಟಾರಾ SUVಗೆ ದಾರಿ ಮಾಡಿಕೊಟ್ಟಿದೆ.
ಮಾರುತಿ ಸುಜುಕಿ, ಭಾರತದಲ್ಲಿ S-ಕ್ರಾಸ್ ಪ್ರೀಮಿಯಂ ಕ್ರಾಸ್‌ಒವರ್‌ಗಳ ಸುಮಾರು 1.7 ಲಕ್ಷ ಕಾರುಗಳನ್ನು ಮಾರಾಟ ಮಾಡಿತ್ತು.ಆದ್ರೆ ನಿರೀಕ್ಷಿತ ಮಟ್ಟದಲ್ಲಿ ಎಸ್-ಕ್ರಾಸ್ ಮಾರಾಟವಾಗಿರಲಿಲ್ಲ.
ಸದ್ಯ ಎಲ್ಲಾ ಕಡೆ SUV ರೀತಿಯಲ್ಲಿರುವ ಕಾರುಗಳನ್ನು ಜನರು ಇಷ್ಟಪಡ್ತಿದ್ದಾರೆ. ಆದ್ರೆ ಮಾರುತಿ ಸುಜುಕಿ S-ಕ್ರಾಸ್ ಬೃಹತ್ ಹ್ಯಾಚ್‌ಬ್ಯಾಕ್‌ನಂತೆ ಕಾಣುತ್ತದೆ. ಅದೇ ಕಾರಣಕ್ಕೆ ಕಾರು ಗ್ರಾಹಕರನ್ನು ಸೆಳೆಯಲು ವಿಫಲವಾಯ್ತು ಅನ್ನೋದು ತಜ್ಞರ ಅಭಿಪ್ರಾಯ.
ಮಾರುತಿ ಸುಜುಕಿ ಎಸ್-ಕ್ರಾಸ್ ಪ್ರೀಮಿಯಂ ಕ್ರಾಸ್‌ಒವರ್ ಅನ್ನು 2015 ರಲ್ಲಿ ಮತ್ತೆ ಪ್ರಾರಂಭಿಸಲಾಯಿತು. ಅದೇ ಸಮಯದಲ್ಲಿ ಹುಂಡೈ ದೇಶದಲ್ಲಿ ಕ್ರೆಟಾ ಎಸ್‌ಯುವಿಯನ್ನು ಬಿಡುಗಡೆ ಮಾಡಿತು. ಎಸ್-ಕ್ರಾಸ್ ಇಮೇಜ್ ಕಾಪಾಡಿಕೊಂಡು ಅನೇಕ ಫೀಚರ್‌ಗಳನ್ನು ನೀಡಿದರೂ ಕ್ರೆಟಾ ಮಾರಾಟವು ಗಗನಕ್ಕೇರಿತು.
ಆದರೂ ಹಲವಾರು ವಿನ್ಯಾಸ ಪರಿಷ್ಕರಣೆಗಳು ಮತ್ತು ನವೀಕರಣದ ಹೊರತಾಗಿಯೂ ಎಸ್-ಕ್ರಾಸ್ ಮಾರಾಟ ನಿರೀಕ್ಷಿತ ಮಟ್ಟ ತಲುಪಲೇ ಇಲ್ಲ. ಇದರ ಜೊತೆಗೆ ಹೊಸದಾಗಿ ಬಂದಿರೋ ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಹೈಬ್ರಿಡ್ ಎಸ್‌ಯುವಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಮಾರುತಿ ಸುಜುಕಿ ಅಂತಿಮವಾಗಿ ಎಸ್-ಕ್ರಾಸ್ ಮಾರಾಟವನ್ನೇ ಸ್ಥಗಿತಗೊಳಿಸಿದೆ.