ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಮಾದಕ ವಸ್ತುಗಳ ಬಳಕೆ, ಕಳ್ಳ ಸಾಗಣೆ, ದುರುಪಯೋಗದ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಮುಂದಿನ ಮೂರು ವರ್ಷಗಳ ಕಾಲ ರಾಷ್ಟ್ರವ್ಯಾಪಿ ಅಭಿಯಾನ ನಡೆಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಮಾದಕ ವಸ್ತುಗಳ ಸಮನ್ವಯ ಕೇಂದ್ರದ (NCORD) 9ನೇ ಉನ್ನತ ಮಟ್ಟದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಮಿತ್ ಶಾ, ಮಾದಕ ವಸ್ತುಗಳ ದುರುಪಯೋಗ ಮತ್ತು ಕಳ್ಳಸಾಗಣೆ ವಿರುದ್ಧ ಮೂರು ವರ್ಷಗಳ ರಾಷ್ಟ್ರವ್ಯಾಪಿ ಅಭಿಯಾನವನ್ನು ಘೋಷಿಸಿದರು.ಈ ಅಭಿಯಾನವು ಮಾರ್ಚ್ 31ರಂದು ಪ್ರಾರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮಾದಕ ವಸ್ತು ಬಳಕೆ ಸಂಬಂಧಿತ ಸಮಸ್ಯೆಯು ಭಯೋತ್ಪಾದನೆಯೊಂದಿಗೆ ಹೆಚ್ಚಿನ ಸಂಬಂಧ ಹೊಂದಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ ಮುಂದಿನ ಮೂರು ವರ್ಷಗಳ ಕಾಲ ರಾಷ್ಟ್ರವ್ಯಾಪಿ ಅಭಿಯಾನ ಮಾರ್ಚ್ 31ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಯುವಕರ ಆರೋಗ್ಯ, ಅವರ ಸಾಮರ್ಥ್ಯ ಮತ್ತು ಬೆಳೆಯುತ್ತಿರುವ ಸಮಾಜದ ಮೇಲೆ ನೇರವಾಗಿ ಬೆದರಿಕೆ ಹಾಕುತ್ತದೆ. ಈ ನಿಟ್ಟಿನಲ್ಲಿ ಮಾದಕ ದ್ರವ್ಯ ಸಮಸ್ಯೆಯನ್ನು ಸಮಗ್ರವಾಗಿ ಪರಿಹರಿಸಲು 2029ರವರೆಗೆ ವಿವರವಾದ ಮಾರ್ಗಸೂಚಿಯನ್ನು ಸಿದ್ಧಪಡಿಸುವಂತೆ ಸರ್ಕಾರದ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಿರುವುದಾಗಿ ಅವರು ತಿಳಿಸಿದರು.
ಅಭಿಯಾನದ ಯಶಸ್ಸನ್ನು ಸಭೆಗಳ ಸಂಖ್ಯೆಯಿಂದ ಅಳೆಯಬಾರದು. ಬದಲಾಗಿ ಫಲಿತಾಂಶ ಮತ್ತು ಬೀರಿರುವ ಪರಿಣಾಮದಿಂದ ಅಳೆಯಬೇಕು ಎಂದ ಅವರು, ಮಾದಕ ದ್ರವ್ಯ ವ್ಯಾಪಾರದ ಕಿಂಗ್‌ಪಿನ್‌ಗಳು, ಹಣಕಾಸುದಾರರು ಮತ್ತು ಯೋಜನಾ ಮಾರ್ಗಗಳನ್ನು ನಿರ್ವಹಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಮಾದಕ ದ್ರವ್ಯ ಪೂರೈಕೆ ಸರಪಳಿಯನ್ನು ಮುರಿಯಲು ನಿರ್ದಯ ಕಾರ್ಯವಿಧಾನವನ್ನು ಅನುಸರಿಸುವಂತೆ ಹೇಳಿದ ಅವರು, ಯುವಜನರನ್ನು ಮಾದಕ ದ್ರವ್ಯ ದುರುಪಯೋಗದಿಂದ ರಕ್ಷಿಸಲು ನಿರಂತರ ಜಾಗೃತಿ ಅಭಿಯಾನಗಳು ಅತ್ಯಗತ್ಯ ಎಂದು ತಿಳಿಸಿದರು.



