ಝಿಕಾ ವೈರಸ್ ಭೀತಿ: ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಕ್ಕಬಳ್ಳಾಪುರದಲ್ಲಿ ಝಿಕಾ ವೈರಸ್ (Zika Virus) ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ (Health Department Guidelines) ಬಿಡುಗಡೆಯಾಗಿದೆ.

ಈ ನಿಯಮವನ್ನು ರಾಜ್ಯದ ಜನತೆಯು ಅನುಸರಿಸಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ಜನರು ಯಾವ ನಿಯಮ ಪಾಲಿಸಬೇಕು?
ರೋಗದ ಲಕ್ಷಣ ಕಂಡು ಬಂದರೆ ಕೂಡಲೇ ಜನರು ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಈ ಮೂಲಕ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳಬಾರದು ಎಂಬ ಸಲಹೆಯನ್ನು ಆರೋಗ್ಯ ಇಲಾಖೆ ನೀಡಿದೆ.

ರೋಗದ ಲಕ್ಷಣಗಳೇನು?
ಕಣ್ಣು ಕೆಂಪಾಗುವಿಕೆ
ತಲೆ ನೋವು
ಜ್ವರ
ಕೀಲುಗಳಲ್ಲಿ ನೋವು
ಗಂಧೆಗಳು
ಸ್ನಾಯುಗಳಲ್ಲಿ ನೋವು

ಝಿಕಾ ವೈರಸ್ ತಡೆಗಟ್ಟಲು ಕ್ರಮ
ನೀರು ಶೇಖರಣಾ ಪರಿಕರಗಳನ್ನು (ಟ್ಯಾಂಕ್‌, ಟಬ್‌ ಇತ್ಯಾದಿ) ಮುಚ್ಚಿಡಬೇಕು. ಅಲ್ಲದೆ, ವಾರಕ್ಕೊಮ್ಮೆ ಅವುಗಳನ್ನು ಸ್ವಚ್ಛಗೊಳಿಸಬೇಕು.

ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು. ಜತೆಗೆ ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು.

ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ, ಮಕ್ಕಳು, ವಯೋವೃದ್ಧರು ವಿಶ್ರಾಂತಿ ಪಡೆಯುವಾಗ ಸೊಳ್ಳೆ ಪರದೆ, ಸೊಳ್ಳೆ ನಿರೋಧಕಗಳನ್ನು ಬಳಸಬೇಕು.

ಸೊಳ್ಳೆಗಳು ಸಾಮಾನ್ಯವಾಗಿ ಸಂತಾನೋತ್ಪತ್ತಿ ಮಾಡುವುದು ನಿಂತ ನೀರಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಮನೆಯ ಸುತ್ತಲೂ ನೀರು ನಿಲ್ಲದಂತೆ ಮುಂಜಾಗ್ರತೆ ವಹಿಸಬೇಕು.

ಪ್ರತಿಯೊಬ್ಬ ವ್ಯಕ್ತಿಯೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ವೈರಸ್ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2 ರಿಂದ 7 ದಿನಗಳವರೆಗೆ ಇರುತ್ತದೆ. ಗರ್ಭಿಣಿಯರು ವಿಶೇಷವಾಗಿ ಎಚ್ಚರಿಕೆ ವಹಿಸಬೇಕು. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆ/ವೈದ್ಯರನ್ನು ಸಂಪರ್ಕ ಮಾಡಬೇಕು ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿಯಲ್ಲಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!