ಝೊಮ್ಯಾಟೊ ಡಿಲಿವರಿ ಪಾರ್ಟ್​ನರ್ಸ್​​ ಮಕ್ಕಳ ಶಿಕ್ಷಣಕ್ಕೆ ಆಸರೆ: 700 ಕೋಟಿ ರೂ. ದೇಣಿಗೆ ನೀಡಿದ ಸಂಸ್ಥಾಪಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಝೊಮ್ಯಾಟೊದ ಸಂಸ್ಥಾಪಕ ಮತ್ತು ಸಿಇಒ ದೀಪಿಂದರ್ ಗೋಯಲ್ ಅವರು ಆಹಾರ ಡಿಲಿವರಿ ಮಾಡುವ ಸಿಬ್ಬಂದಿಯ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡಲು 90 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 700 ಕೋಟಿ ರೂ.) ಅನ್ನು ಝೊಮ್ಯಾಟೊ ಫ್ಯೂಚರ್ ಫೌಂಡೇಶನ್‌ಗೆ ದೇಣಿಗೆ ನೀಡಿದ್ದಾರೆ.

ಕಂಪನಿಯ ಉದ್ಯೋಗಿಗಳೊಂದಿಗೆ ಹಂಚಿಕೊಂಡ ಆಂತರಿಕ ಜ್ಞಾಪಕ ಪತ್ರದಲ್ಲಿ,ಉದ್ಯೋಗಿಗಳ ಷೇರು ಒಡೆತನದ ಯೋಜನೆ (Employee Stock Ownership Plan-ESOP) ಮೂಲಕ ಮಕ್ಕಳ ಶಿಕ್ಷಣಕ್ಕೆ ನೀಡಲಾಗುತ್ತದೆ. ಕಳೆದ ತಿಂಗಳ ಸರಾಸರಿ ಷೇರು ಬೆಲೆಯಲ್ಲಿ,ಉದ್ಯೋಗಿಗಳ ಷೇರು ಒಡೆತನ ಯೋಜನೆಯ ಷೇರು ಮೌಲ್ಯ ಸುಮಾರು 90 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 700 ಕೋಟಿ ರೂ.) ಆಗಿದೆ ಎಂದು ಅವರು ಹೇಳಿದ್ದಾರೆ.

ನಾನು ಈ ಇಎಸ್​​ಒಪಿಗಳಿಂದ ಬರುವ ಎಲ್ಲ ಆದಾಯವನ್ನು ಝೊಮ್ಯಾಟೊ ಫ್ಯೂಚರ್ ಫೌಂಡೇಶನ್​ಗೆ (ZFF) ದೇಣಿಗೆ ನೀಡುತ್ತಿದ್ದೇನೆ. ಝೊಮ್ಯಾಟೊ ಫ್ಯೂಚರ್ ಫೌಂಡೇಶನ್​ ಆಹಾರ ಡೆಲಿವರಿ ಮಾಡುವ ವ್ಯಕ್ತಿಗಳ ಕನಿಷ್ಠ ಎರಡು ಮಕ್ಕಳ ಶಿಕ್ಷಣಕ್ಕೆ ಅನುಕೂಲ ಮಾಡಲಿದೆ ಎಂದಿದ್ದಾರೆ.

ಆಹಾರ ಡಿಲಿವರಿ ಮಾಡುವ ಸಿಬ್ಬಂದಿ ಕನಿಷ್ಠ 5 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿರಬೇಕು. ಆಗ ಪ್ರತಿ ಮಗುವಿಗೆ ವಾರ್ಷಿಕ 50,000 ರೂಪಾಯಿವರೆಗೆ ಸಹಾಯ ನೀಡಲಾಗುತ್ತದೆ. ಒಂದು ವೇಳೆ ಆಹಾರ ಡಿಲಿವರಿ ಮಾಡುವವರು ಕಂಪನಿಯೊಂದಿಗೆ 10 ವರ್ಷಗಳನ್ನು ಪೂರ್ಣಗೊಳಿಸಿದರೆ ಈ ಮೊತ್ತವು ಪ್ರತಿ ಮಗುವಿಗೆ ವಾರ್ಷಿಕ 1 ಲಕ್ಷ ರೂಪಾಯಿಗೆ ಏರುತ್ತದೆ ಎಂದು ದೀಪಿಂದರ್ ಗೋಯಲ್ ಸ್ಪಷ್ಟನೆ ನೀಡಿದ್ದಾರೆ.

ಆಹಾರ ಪೂರೈಕೆ ಮಾಡುವವರು ಮಹಿಳೆಯರಾಗಿದ್ದರೆ, ಅವರಿಗೆ ಇನ್ನೂ ಕಡಿಮೆ ಸೇವಾ ಮಿತಿ ಇರುತ್ತದೆ. ನಾವು ಹೆಣ್ಣು ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಹೊಂದಿದ್ದೇವೆ. ಒಂದು ಹುಡುಗಿ 12ನೇ ತರಗತಿ ಪೂರ್ಣಗೊಳಿಸಿದರೆ ಅಥವಾ ಪದವಿಯನ್ನು ಪೂರ್ಣಗೊಳಿಸಿದರೆ ನಗದು ಬಹುಮಾನ ನೀಡುತ್ತೇವೆ. ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿವೇತನವೂ ಇರುತ್ತದೆ ಎಂದು ಗೋಯಲ್ ಮಾಹಿತಿ ನೀಡಿದ್ದಾರೆ.

ಆಹಾರ ಪೂರೈಕೆ ಮಾಡುವವರು ಉದ್ಯೋಗದಲ್ಲಿರುವಾಗ ಅಪಘಾತಗಳಂತಹ ದುರದೃಷ್ಟಕರ ಘಟನೆಗಳಿಗೆ ಒಳಗಾದರೆ, ಅವರ ಸೇವಾ ಅವಧಿಯನ್ನು ಲೆಕ್ಕಿಸದೆ ಅವರ ಕುಟುಂಬಗಳಿಗೆ ಶೈಕ್ಷಣಿಕ ಮತ್ತು ಜೀವನೋಪಾಯದ ಬೆಂಬಲವನ್ನು ಒದಗಿಸಲಾಗುವುದು ಎಂದು ದೀಪಿಂದರ್ ಗೋಯೆಲ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!