Wednesday, February 28, 2024

ಇಡೀ ದೇಶದಲ್ಲಿಯೇ ಜಾತಿ ಗಣತಿ ನಡೆಯಬೇಕು: ಡಾ.ಯತೀಂದ್ರ ಸಿದ್ದರಾಮಯ್ಯ

ಹೊಸದಿಗಂತ ವರದಿ,ಮೈಸೂರು:

ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಮಾನತೆಯನ್ನು ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ನಿಟ್ಟಿನಲ್ಲಿ ಕಳೆದ ಬಾರಿಯ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆಸಿರುವ ಜಾತಿ ಜನಗಣತಿ ವರದಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಮಂಗಳವಾರ ನಗರದ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಸಂವಿಧಾನ ಸಮರ್ಪಣೆ ದಿನದ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮೈಸೂರು ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು. ಸಿದ್ದರಾಮಯ್ಯ ಅವರ ಹಿಂದಿನ ಸರ್ಕಾರ ರಾಜ್ಯದಲ್ಲಿ ನಜಾತಿ ಜನಗಣತಿ ನಡೆಸಿತು. ಈಗ ಅದರ ವರದಿ ಸ್ವೀಕರಿಸುತ್ತಿದೆ. ಆದರೆ, ಬಿಜೆಪಿ ಜಾತಿ ಗಣತಿ ಮೂಲಕ ದೇಶ ಒಡೆಯುತ್ತಿದೆ ಎಂದು ಆರೋಪಿಸಿದರು.

ನಮ್ಮ ರಾಜ್ಯ ಮಾತ್ರವಲ್ಲ ಇಡೀ ದೇಶದಲ್ಲಿಯೇ ಜಾತಿ ಗಣತಿ ನಡೆಸಬೇಕೆಂಬುದು ಕಾಂಗ್ರೆಸ್ ಪಕ್ಷದ ಆಶಯವಾಗಿದೆ. ಹಿಂದುಳಿದ ಮತ್ತು ದಲಿತ ಸಮಾಜವನ್ನು ಸಂವಿಧಾನ ರಕ್ಷಿಸಿದೆ. ಅದೇ ವರ್ಗಗಳು ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಇದೆ. ಆದರೆ, ದಿನನಿತ್ಯ ಸಂವಿಧಾನ ರಕ್ಷಿಸುತ್ತಿರುವುದು ನಮಗೇ ತಿಳಿದಿಲ್ಲ. ಸಂಪ್ರದಾಯವಾದಿಗಳು ಮತ್ತು ಹಿಂದುತ್ವವಾದಿಗಳಿAದ ಸಂವಿಧಾನಕ್ಕೆ ಅಪಾಯ ಎದುರಾಗಿದೆ ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ರವರು ನೀಡಿರುವ ಸಂವಿಧಾನ ಬಹುಸಂಖ್ಯಾತ ಶೋಷಿತರಿಗೆ ಸಮಾನ ಹಕ್ಕು ಕೊಟ್ಟಿತು. ಸನಾತನ ಮತ್ತು ಸಾಮಾಜಿಕ ಶ್ರೇಣಿಕೃತ ವ್ಯವಸ್ಥೆ ಇರಬೇಕೆಂದು ಬಯಸುವವರು ಸಂವಿಧಾನ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬದಲಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಶತಮಾನಗಳಿಂದ ಹಿಂದುಳಿದವರಿಗೆ ಮೀಸಲಾತಿ ಕೊಡಲಾಗಿದೆ. ಈಗ ಮುಂದುರಿಗೆ ಜಾತಿಗಳಿಗೂ ಮೀಸಲಾತಿ ನೀಡಿದರು. ಅವರು ಒಂದೇ ಒಂದು ಹೋರಾಟ ಮಾಡಲಿಲ್ಲ. ಇದನ್ನೂ ಯಾರು ವಿರೋಧವೂ ಮಾಡಲಿಲ್ಲ. ಆದರೆ, ದಲಿತರು ಮೀಸಲಾತಿ ಹೆಚ್ಚಿಸುವಂತೆ ಬೀದಿಗಿಳಿದು ಹೋರಾಟ ಮಾಡಬೇಕು. ಅದನ್ನು ಯಾರು ಕೇಳುವುದಿಲ್ಲ ಎಂದರು.

ಬಂಡವಾಳಶಾಹಿ ಉದ್ಯಮಿಗಳಿಂದ ಸಂಪತ್ತಿನ ಬಲ ಪಡೆದು ಎಲ್ಲರ ಬಾಯಿ ಮುಚ್ಚಿಸುತ್ತದೆ. ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಲಾಗುತ್ತಿದೆ. ಧರ್ಮ, ಜಾತಿಗಳ ಸಂಘರ್ಷ ಏರ್ಪಟ್ಟಿದೆ. ಒಂದು ಧರ್ಮದವರನ್ನು ಕೊಂದರು ತಪ್ಪಿಲ್ಲ. ಕಾನೂನು ಗಾಳಿಗೆ ತೂರಿದ್ದಾರೆ ಎಂದು ಕಿಡಿಕಾರಿದರು. ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಮುಖ್ಯ ಭಾಷಣ ಮಾಡಿದರು. ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಣ್ಣ ಬಡಿಗೇರ್, ಜಿಲ್ಲಾ ಪ್ರಧಾನ ಸಂಚಾಲಕ ಮಲ್ಲಹಳ್ಳಿ ನಾರಾಯಣ್, ದೊಡ್ಡಸಿದ್ದು ಹಾದನೂರು, ಚಂದ್ರುಕಳ್ಳಿಮುದ್ದನಹಳ್ಳಿ, ವಾಟಾಳ್ ನಾಗರಾಜು, ಬಸವರಾಜು ದೇವರಸನಹಳ್ಳಿ, ಬೊಮ್ಮೇನಹಳ್ಳಿ ಕುಮಾರ್, ಸೋಮಯ್ಯ, ಮಹದೇವಮ್ಮ ಕಟ್ಟೆ ಮಳಲವಾಡಿ ಮುಂತಾದರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!