ಹೊಸ ದಿಗಂತ ವರದಿ, ಮಡಿಕೇರಿ:
ಕೊಡಗಿನ ಮತದಾರರು ಪ್ರಜ್ಞಾವಂತರಿದ್ದು, ಜಿಲ್ಲೆಯ ಎರಡು ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಎಂದು ವೀರಾಜಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಚುನಾವಣಾ ರಾಜಕೀಯದಲ್ಲಿ ನಿರತರಾಗಿದ್ದ ಬೋಪಯ್ಯ, ಗುರುವಾರ ಮನೆಯಲ್ಲೇ ಕಾಲ ಕಳೆದರು.
ಈ ಸಂದರ್ಭ ‘ಹೊಸದಿಗಂತ’ದೊಂದಿಗೆ ಮಾತನಾಡಿದ ಅವರು, ನಾನು ಸಾಕಷ್ಟು ಚುನಾವಣೆ ಎದುರಿಸಿದ್ದೇನೆ. ಆದರೆ ಕೊಡಗಿನಲ್ಲಿ ಈ ಬಾರಿಯಂತಹ ಚುನಾವಣೆಯನ್ನು ಎಂದೂ ಕಂಡಿಲ್ಲ. ಈ ಬಾರಿ ಚುನಾವಣೆಯಲ್ಲಿ ಹಣದ ಹೊಳೆ ಹರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಅಭಿವೃದ್ಧಿಯ ಆಧಾರದಲ್ಲಿ ಮತ ಕೇಳಿದ್ದೇವೆ. ಆದರೆ ಎದುರು ಪಕ್ಷದವರು ಜಾತಿ ರಾಜಕಾರಣ ಮಾಡಿದ್ದಾರೆ. ಕೊಡಗಿನಲ್ಲಿ ಮೊದಲ ಬಾರಿಗೆ ವ್ಯಾಪಾರೀಕರಣ ನಡೆದಿದೆ. ಬೆಂಗಳೂರು ಹಾಗೂ ಹಾಸನ ರಾಜಕಾರಣವನ್ನು ಕೊಡಗಿನಲ್ಲಿ ತಂದು ಹಾಳು ಮಾಡಿದ್ದಾರೆ. ಮುಂದೆ ಯಾರು ಕೂಡಾ ಗ್ರಾ.ಪಂ ಚುನಾವಣೆಯಲ್ಲೂ ನಿಲ್ಲಲು ಆಸಕ್ತಿ ತೋರದ ಮಟ್ಟಿಗೆ ಇಲ್ಲಿನ ರಾಜಕೀಯವನ್ನು ತಂದಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮೀಕ್ಷೆಗಳೇ ಫಲಿತಾಂಶವಲ್ಲ
ಸಮೀಕ್ಷೆಗಳೆಲ್ಲವೂ ಚುನಾವಣಾ ಫಲಿತಾಂಶ ಅಲ್ಲ. ಆದ್ದರಿಂದ ಸಮೀಕ್ಷೆಗಳ ಬಗ್ಗೆ ಏನೂ ಹೇಳುವುದಿಲ್ಲ. ಕೊಡಗಿನಲ್ಲಿ ಹಣ ಬಲ ನಡೆಯುತ್ತೋ ಜನ ಬಲ ನಡೆಯುತ್ತೋ ಅಂತ ಕಾದು ನೋಡೋಣ ಎಂದರು.
ಚುನಾವಣೆ ಗೆಲ್ಲುವುದೊಂದೇ ನಮ್ಮ ಉದ್ದೇಶ ಅಲ್ಲ. ಸದೃಢ ದೇಶ ಕಟ್ಟುವುದು ನಮ್ಮ ಧ್ಯೇಯ. ಚುನಾವಣೆ ಒಂದು ಪ್ರಕ್ರಿಯೆ ಅಷ್ಟೇ. ಜನಾಭಿಪ್ರಾಯಕ್ಕೆ ನಾವು ಯಾವತ್ತೂ ಬದ್ಧರಾಗಿರುತ್ತೇವೆ ಎಂದು ನುಡಿದರು.