ಫುಜ್ಲಾನಾ ಜಿಪಿಎಲ್ ಉತ್ಸವದ ಸಂಭ್ರಮದಲ್ಲಿ ಮಂಗಳೂರಿನ ಕಡಲತಡಿ: ಹೆಲಿಕಾಪ್ಟರ್ ಮೂಲಕ ಜಾಲಿ ರೈಡ್‌ಗಿದೆ ಅವಕಾಶ!

ಹೊಸದಿಗಂತ ವರದಿ, ಮಂಗಳೂರು:

ಕಡಲತಡಿ ಮಂಗಳೂರು ಫುಜ್ಲಾನಾ ಜಿಪಿಎಲ್ ಉತ್ಸವದ ಸಂಭ್ರಮದಲ್ಲಿದೆ. ಕೊಡಿಯಾಲ್ ಸ್ಪೋರ್ಟ್ಸ್ ಅಸೋಸಿಯೇಶನ್ ವತಿಯಿಂದ ನೇತ್ರಾವತಿ ನದಿ ತೀರದ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಈ ಉತ್ಸವ ಜನಾಕರ್ಷಣೆ ಪಡೆದುಕೊಂಡಿದೆ.
ಶುಕ್ರವಾರದಿಂದ ಉತ್ಸವ ಆರಂಭಗೊಂಡಿದ್ದು, ಈ ಬಾರಿ ಟೂರ್ನಿಯಲ್ಲಿ `ಹೆಲಿ ಟೂರಿಸಂ’ ವಿಶೇಷ ಆಕರ್ಷಣೆಯಾಗಿದೆ.
ಫೆ.೨೫ರಿಂದ ೨೭ರವರೆಗೆ ಈ ಟೂರ್ನಿ ನಡೆಯಲಿದ್ದು, ಕರ್ನಾಟಕ, ಮಹಾರಾಷ್ಟ್ರ, ಕೇರಳ, ತೆಲಂಗಾಣದ ಸೇರಿ ಕರಾವಳಿ ಕರ್ನಾಟಕವನ್ನು ಒಳಗೊಂಡ ೧೬ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ.
ಜಿಪಿಎಲ್ ಉತ್ಸವದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಒಂದು ಭಾಗವಾದರೆ, ಇಡೀ ಉತ್ಸವ ವೈವಿಧ್ಯತೆ ಮೂಲಕ ಗಮನ ಸೆಳೆಯಲಿದೆ.
ಹೆಲಿ ಟೂರಿಸಂ ವೈಶಿಷ್ಟ್ಯತೆ
ಶುಕ್ರವಾರದಿಂದ ಭಾನುವಾರದವರೆಗೆ ಹೆಲಿ ಟೂರಿಸಂ ಅವಕಾಶವನ್ನು ನೀಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿರುವ ಎಟಿಸಿ (ಏರ್‌ಟ್ರಾಫಿಕ್ ಕಂಟ್ರೋಲ್) ನಿಯಂತ್ರಣದಲ್ಲಿ ಈ ಹೆಲಿಕಾಪ್ಟರ್ ಪ್ರಯಾಣಿಸಲಿದ್ದು, ಒಬ್ಬರಿಗೆ 10 ನಿಮಿಷಕ್ಕೆ 4 ಸಾವಿರ ರೂ. ದರ ವಿಧಿಸಲಾಗಿದೆ. ಏಕಕಾಲಕ್ಕೆ ೬ಮಂದಿಗೆ ಸಂಚರಿಸಬಹುದಾಗಿದೆ. ಅಡ್ಯಾರ್ ಸಹ್ಯಾದ್ರಿ ಕ್ಯಾಂಪಸ್‌ನಿಂದ ಹೊರಟ ಈ ಹೆಲಿಕಾಪ್ಟರ್ ಉಳ್ಳಾಲ ಸೇತುವೆ, ಧಕ್ಕೆ, ಬೆಂಗರೆ, ಮಂಗಳೂರು ನಗರದಾದ್ಯಂತ ಸುತ್ತಾಡಿ ಮತ್ತೆ ಸಹ್ಯಾದ್ರಿ ಕ್ಯಾಂಪಸ್‌ನಲ್ಲೇ ಭೂಸ್ಪರ್ಶ ಆಗಲಿದೆ. ಸಾರ್ವಜನಿಕರ ಸ್ಪಂದನೆಯನ್ನು ಗಮನಿಸಿ ಸೋಮವಾರದವರೆಗೆ ಮುಂದುವರಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎನ್ನುತ್ತಾರೆ ಫುಜ್ಲಾನಾ ಜಿಪಿಎಲ್ ಟೂರ್ನಿಯ ಮುಖ್ಯಸ್ಥರಾದ ನರೇಶ್ ಶೆಣೈ.
120 ಕ್ಕೂ ಅಧಿಕ ಮಂದಿ ಬುಕ್ಕಿಂಗ್
ಹೆಲಿ ಟೂರಿಸಂಗೆ ಈಗಾಗಲೇ 120 ಮಂದಿ ಬುಕ್ಕಿಂಗ್ ಮಾಡಿದ್ದು, ಅವರಿಗೆ ಸಮಯ ನಿಗದಿಪಡಿಸುವ ಅವಧಿಯಲ್ಲಿ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಹೆಲಿಕಾಪ್ಟರ್ ನಗರ ಸಂಚಾರ ನಡೆಸಲಿದೆ.
ಬೋಟಿಂಗ್, ಕಿಡ್‌ರೆನ್
ಹೆಲಿ ಟೂರಿಸಂ ಮಾತ್ರವಲ್ಲದೆ ನೇತ್ರಾವತಿಯಲ್ಲಿ ಬೋಟಿಂಗ್ ವ್ಯವಸ್ಥೆ, ಮಕ್ಕಳಿಗೆ ಆಟವಾಡಲು ಕಿಡ್‌ರೆನ್ ನಿರ್ಮಿಸಲಾಗಿದೆ. ಗೂಡುದೀಪ ಸ್ಪರ್ಧೆ, ಕಸದಿಂದ ರಸ, ಆಭರಣಗಳ ತಯಾರಿ, ಮೆಹಂದಿ, ಕ್ಲೇ ಮಾಡೆಲಿಂಗ್, ಹೂ ಅಲಂಕಾರ, ಕೇಶ ವಿನ್ಯಾಸ, ಡ್ರಾಯಿಂಗ್, ಕೊಲಾಜ್, ಜಿಎಸ್‌ಬಿ ಟ್ಯಾಲೆಂಟ್, ಅಡುಗೆ, ಪೋಸ್ಟರ್ ತಯಾರಿಕೆ, ಫ್ಯಾನ್ಸಿ ಡ್ರೆಸ್, ಟಗ್ ಆಫ್ ವಾರ್, ರಂಗೋಲಿ, ಮ್ಯೂಸಿಕ್ ವರ್ಕ್ ಶಾಪ್, ಹೌಸಿ ಹೌಸಿ ಸಹಿತ ಇನ್ನು ಹಲವು ಬಗೆಯ ಸ್ಪರ್ಧೆ ಆಯೋಜಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!