ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಹೀಗಾಗಿ ನಾಲ್ಕು ಸಫಾರಿ ವಾಹನ ಖರೀದಿಸಲು ಅರಣ್ಯ ಇಲಾಖೆ ಯೋಜಿಸಿದೆ.
ಸುಮಾರು 1024 ಸಾವಿರ ಚದರ ಕಿಮೀ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ದಕ್ಷಿಣ ಭಾರತದ ಅತಿ ದೊಡ್ಡ ಹುಲಿ ಸಂರಕ್ಷಿತ ಪ್ರದೇಶವೂ ಆಗಿದೆ. 191 ಕ್ಕೂ ಹೆಚ್ಚು ಹುಲಿಗಳು, 1116 ಕ್ಕೂ ಹೆಚ್ಚು ಆನೆಗಳು ಸೇರಿದಂತೆ ಚಿರತೆ ಕರಡಿ, ಜಿಂಕೆ, ಕಾಡೆಮ್ಮೆ, ಮೊದಲಾದ ವನ್ಯಜೀವಿಗಳ ಆವಾಸ ಸ್ಥಾನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಬಂಡೀಪುರದ ಸಫಾರಿ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು ಪರಿಸರ ಪ್ರವಾಸೋದ್ಯಮವು ಸಾಕಷ್ಟು ಅಭಿವೃದ್ಧಿಯಾಗಿದೆ.
ಹೀಗಾಗಿ ಬಂಡೀಪುರದ ಸಫಾರಿಗೆ ಆಗಮಿಸುವವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ. ಸಫಾರಿಗೆ ಬಂದು ಟಿಕೆಟ್ ಸಿಗದೆ ವಾಪಾಸ್ ಹೋಗುವ ಪ್ರವಾಸಿಗರ ಸಂಖ್ಯೆಯೂ ಇದೆ. ಯಾರಿಗೂ ನಿರಾಶೆ ಮಾಡದ ಆಲೋಚನೆ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ವಾಹನ ಖರೀದಿಸುವ ಆಲೋಚನೆಯಲ್ಲಿದ್ದಾರೆ.
ಇನ್ನು ಬಂಡೀಪುರ ಅಪಾರ ವನ್ಯ ಸಂಪತ್ತನ್ನು ಹೊಂದಿದೆ. ಹುಲಿ, ಚಿರತೆ, ಕರಡಿ, ಆನೆ, ಕಾಡೆಮ್ಮೆ ಸೇರಿದಂತೆ ಅನೇಕ ವನ್ಯ ಪ್ರಾಣಿಗಳನ್ನು ಸಫಾರಿ ವೇಳೆ ಕಣ್ತುಂಬಿಕೊಳ್ಳಬಹುದಾಗಿದೆ. ಕೇರಳ, ತಮಿಳುನಾಡಿನ ಊಟಿಗೆ ಹೋಗುವ ಪ್ರವಾಸಿಗರು ಬಂಡೀಪುರದ ಮೇಲೆ ಹಾದುಹೋಗುವ ಹಿನ್ನೆಲೆಯಲ್ಲಿ ಸಫಾರಿ ನಡೆಸಿ ಹೋಗಲೂ ಇಚ್ಚಿಸುತ್ತಾರೆ. ಬಂಡೀಪುರದ ಸಫಾರಿ ವಾಹನದಲ್ಲಿ 31 ವಾಹನ ಬಳಸಲು ಅನುಮತಿಯಿದೆ. ಆದರೆ ಇಲ್ಲಿಯವರೆಗೂ 27 ವಾಹನಗಳನ್ನಷ್ಟೇ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ವಾಹನಗಳನ್ನು ಖರೀದಿಸಿ ಸಫಾರಿಗೆ ಬಳಸುವ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಪ್ಲ್ಯಾನ್ ಮಾಡಿಕೊಂಡಿದ್ದಾರೆ.