ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮನ್ಯವಾಗಿ ರಸ್ತೆಗಳು, ಗುಂಡಿಗಳು ಮತ್ತು ಮ್ಯಾನ್ ಹೋಲ್ ಗಳ ಕಳಪೆ ಸ್ಥಿತಿಯಿಂದ ಸಂಭವಿಸುವ ಸಾವುಗಳಿಗೆ ನಾವು ನಿಸರ್ಗವೇ ಕಾರಣ ಎಂದು ವಾದ ಮಾಡುತ್ತೇವೆ. ಆದ್ರೆ ಇಂತಹ ಘಟನೆಗಳಿಗೆ ನಿಸರ್ಗ ಕಾರಣವಲ್ಲ. ಅವು ಮಾನವ ನಿರ್ಮಿತವಾಗಿವೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಈ ವೇಳೆ ಮಹಾರಾಷ್ಟ್ರ ಸರ್ಕಾರ ಮತ್ತು ನಾಗರಿಕ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್, ಸುರಕ್ಷಿತ ರಸ್ತೆಗಳನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರ ಮತ್ತು ನಾಗರಿಕ ಸಂಸ್ಥೆಗಳ ಸಾಂವಿಧಾನಿಕ ಬಾಧ್ಯತೆಯಾಗಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಆರಿಫ್ ಡಾಕ್ಟರ್ ಅವರ ವಿಭಾಗೀಯ ಪೀಠವು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ವ್ಯಾಪ್ತಿಯಲ್ಲಿರುವ ನಗರದ ಎಲ್ಲಾ ರಸ್ತೆಗಳನ್ನು ನಿರ್ವಹಣೆ ಮತ್ತು ದುರಸ್ತಿ ಕೆಲಸಕ್ಕಾಗಿ ಹಸ್ತಾಂತರಿಸುವಂತೆ ಕಳೆದ ವರ್ಷ ನ್ಯಾಯಾಲಯದಲ್ಲಿ ಮಾಡಿದ ಸಲಹೆಯ ಕುರಿತು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.
ಮುಂಬೈ ಎಲ್ಲಾ ರಸ್ತೆಗಳಲ್ಲಿನ ಗುಂಡಿಗಳ ದುರಸ್ತಿಗೆ ನಿರ್ದೇಶಿಸುವ 2018 ರ ಹೈಕೋರ್ಟ್‌ನ ಆದೇಶಗಳನ್ನು ಜಾರಿಗೊಳಿಸಲು ವಿಫಲವಾದ ನಾಗರಿಕ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮವನ್ನು ಕೋರಿ ವಕೀಲ ರುಜು ಠಕ್ಕರ್ ಸಲ್ಲಿಸಿದ ಅರ್ಜಿಯನ್ನು ಪೀಠವು ವಿಚಾರಣೆ ನಡೆಸಿತು.
ಈ ವೇಳೆ 2018 ರಲ್ಲಿ ನ್ಯಾಯಾಲಯವು ಎಲ್ಲಾ ರಸ್ತೆಗಳನ್ನು ಗುಂಡಿಗಳಿಂದ ಮುಕ್ತಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ನೀಡಿದ ಆದೇಶದ ಮೇಲೆ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದರ ಕುರಿತು ಸಮಗ್ರವಾದ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ಎಲ್ಲಾ ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ಸೂಚಿಸಿತು.
ಪ್ರತಿದಿನ ಕೆಲವು ಘಟನೆಗಳು ನಡೆಯುತ್ತವೆ. ಇವು ಮಾನವ ನಿರ್ಮಿತ. ಈ ಸಾವುಗಳಿಗೆ ಕಾರಣ ನೈಸರ್ಗಿಕವಲ್ಲ. ಇದು ಮಾನವ ನಿರ್ಮಿತ. ನೀವು(ಸರ್ಕಾರ ಮತ್ತು ನಾಗರಿಕ ಸಂಸ್ಥೆಗಳು) ಇದನ್ನು ತಡೆಯಬೇಕು. ಇದು ನಿಮ್ಮ ಜವಾಬ್ದಾರಿ, ಸಂವಿಧಾನಾತ್ಮಕ ಬಾಧ್ಯತೆಯಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಉಪಾಧ್ಯಾಯ ಹೇಳಿದರು.
ಇಂತಹ ವಿಷಯಗಳ ಕುರಿತು ಆದೇಶ ಹೊರಡಿಸುವುದು ನ್ಯಾಯಾಲಯದ ಕೆಲಸವಲ್ಲ ಎಂದು ಪೀಠ ಹೇಳಿದೆ.
ಮುಂಬೈನಲ್ಲಿ ರಸ್ತೆಗಳನ್ನು ಕಾಂಕ್ರೀಟೀಕರಣಗೊಳಿಸಲಾಗುತ್ತಿದ್ದು, ಗುಂಡಿಗಳ ಸಮಸ್ಯೆ ಎದುರಾದಾಗ ಸಂಬಂಧಪಟ್ಟ ರಸ್ತೆಯನ್ನು ಸರಿಪಡಿಸಲಾಗುವುದು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.