ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೆಜ್ಜೆ ಹೆಜ್ಜೆಗೂ ಹಿನ್ನಡೆಯಾಗುತ್ತಿದೆ. ಒಂದೆಡೆ ಎಫ್ಐಆರ್ ದಾಖಲಾಗಿದೆ. ತನಿಖೆ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಕುರ್ಚಿಗಾಗಿ ಒಳಗೊಳಗೆ ಕಾದಾಟ ಶುರುವಾಗಿದೆ.
ಇದರ ಜೊತೆಗೆ ಮೊದಲ ಬಾರಿಗೆ ಪತ್ನಿ ಹೆಸರು ರಾಜಕೀಯ ಆರೋಪ ಪ್ರತ್ಯಾರೋಪದಲ್ಲಿ ಕಂಡುಬಂದಿದ್ದು ಸಿದ್ದರಾಮಯ್ಯ ಬೇಸರಕ್ಕೆ ಕಾರಣವಾಗಿದೆ. ಭಾಷಣದಲ್ಲಿ ಸಿದ್ದರಾಮಯ್ಯ ಮನನೊಂದು ಈ ಘಟನೆ ವಿವರಿಸಿದ್ದಾರೆ.
ರಾಯಚೂರಿನ ಮಾನ್ವಿಯಲ್ಲಿ ಆಯೋಜಿಸಿದ ಕಾಂಗ್ರೆಸ್ ಸ್ವಾಭಿಮಾನ ಸಮಾವೇಶ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ನನ್ನ ಪತ್ನಿ ಯಾವತ್ತೂ ರಾಜಕೀಯ ಬಂದಿಲ್ಲ. ಯಾವ ಕಾರ್ಯಕ್ರಮಗಳಲ್ಲೂ ಭಾಗಿಯಾಗಿಲ್ಲ. ಆದರೆ ವಿಪಕ್ಷಗಳು ನನ್ನ ಪತ್ನಿ ಹೆಸರನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಿದೆ. ರಾಜಕೀಯದಿಂದ ದೂರವಿದ್ದ ಹೆಂಡತಿಯನ್ನು ಬೀದಿಗೆ ತಂದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಾನು ಏನು ತಪ್ಪು ಮಾಡಿದ್ದೇನೆ? ಇದು ಬೇಸರ ತರಿಸಿದೆ ಎಂದು ಹೇಳಿದ್ದಾರೆ.
ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಆತ್ಮಸಾಕ್ಷಿಯಾಗಿ ಹೇಳುತ್ತಿದ್ದೇನೆ. ವಿಪಕ್ಷಗಳು ನನ್ನ ರಾಜೀನಾಮೆ ಕೇಳುತ್ತಿದೆ. ನಿಮ್ಮ ಬೆಂಬಲವಿದ್ದರೆ ಸಾಕು, ಯಾರೂ ಏನೂ ಮಾಡಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿಯವರು ಪ್ರತಿ ಬಾರಿ ರಾಜೀನಾಮೆ ಕೊಡಿ, ರಾಜೀನಾಮೆ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ, ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಡಾ ಪ್ರಕರಣದಲ್ಲಿ ರಾಜಕೀಯ ಷಡ್ಯಂತ್ರಕ್ಕೆ ನನ್ನ ಹಾಗೂ ಕುಟುಂಬವನ್ನು ವಿಪಕ್ಷ ಬಳಸಿಕೊಂಡಿರುವುದು ಬೇಸರ ತರಿಸಿದೆ. ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿಯವರು ಅಡ್ಡಿಪಡಿಸುತ್ತಿದ್ದಾರೆ. ಹಸಿವು ಮುಕ್ತ ಕರ್ನಾಟಕವಾಗಬೇಕು ಎಂದು ಅನ್ನ ಭಾಗ್ಯ ಯೋಜನೆ ಜಾರಿಗೆ ತಂದಿದ್ದೇನೆ. ಕಾಂಗ್ರೆಸ್ ಯೋಜನೆಗಳಿಗೆ ಹಣ ಇಲ್ಲ ಎಂದು ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ. ರಾಜ್ಯದ ಯಾವುದೇ ಮೂಲೆಯಲ್ಲಿ ಅಭಿವದ್ಧಿ ಕೆಲಸಗಳು ನಿಂತಿಲ್ಲ ಎಂದು ಸಿದ್ದರಾಮ್ಯ ಹೇಳಿದ್ದಾರೆ.