ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಭೂಮಿಯನ್ನು ಸರ್ವೆ ಮಾಡಲು ಇನ್ಮುಂದೆ ರೋವರ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಹೀಗಾಗಿ ಕೇವಲ 10 ನಿಮಿಷದಲ್ಲೇ ಸರ್ವೆ ಕಾರ್ಯ ಮುಕ್ತಾಯವಾಗಲಿದೆ ಎಂಬುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.
ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಇಲಾಖೆಯ ನೌಕರರ ಸಂಘಗಳ 36ನೇ ರಾಷ್ಟ್ರೀಯ ಭೂಮಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಆಧುನಿಕ ಕಂಪ್ಯೂಟರ್ ಜಗತ್ತಿನಲ್ಲೂ ಸಹ ಸರ್ವೇ ಕೆಲಸವನ್ನು ತಾಂತ್ರಿಕಗೊಳಿಸದೆ ಜನರ ಮೇಲೆ ಹೊರೆ ಹಾಕುವುದು ಅಮಾನವೀಯ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ನಡವಳಿಕೆ ಎಂದು ಅಭಿಪ್ರಾಯ ಪಟ್ಟರು.
ಸರ್ವೇ ಕೆಲಸವನ್ನು 1802 ರಿಂದಲೂ ಚೈನ್ ಹಿಡಿದೇ ಭೂಮಿಯನ್ನು ಅಳೆಯುವ ಸಂಪ್ರದಾಯ ಚಾಲ್ತಿಯಲ್ಲಿದೆ. ಬಿಸಿಲಿನಲ್ಲಿ ಸರ್ವೇಯರ್ ಜೊತೆಗೆ ಇಬ್ಬರು ಸಹಾಯಕರೂ ಕೆಲಸ ಮಾಡಬೇಕಿತ್ತು. ಸರ್ವೇ ಮಾಡಲು ಕನಿಷ್ಟ 70 ನಿಮಿಷ ಅದನ್ನು ನಕ್ಷೆ ಮಾಡಲು 3 ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಆದರೆ, ಆಧುನಿಕ ತಂತ್ರಜ್ಞಾನ ಆಧಾರಿತ ರೋವರ್ ಈ ಕೆಲಸವನ್ನು ಕೇವಲ 10 ನಿಮಿಷಕ್ಕೆ ಮುಗಿಸಲಿದೆ ಎಂದು ಮಾಹಿತಿ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಿಂದೆಯೇ 775 ರೋವರ್ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದರು. ಪ್ರಸ್ತುತ 5 ಸಾವಿರ ರೋವರ್ ಖರೀದಿಗೆ ಅನುಮತಿ ನೀಡಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಭೂ ಮಾಪಕರಿಗೂ ಒಂದು ರೋವರ್ ನೀಡುವುದು ಹಾಗೂ ಸರ್ವೇ ನಕ್ಷೆ ನೂರಕ್ಕೆ ನೂರು ಗಣಕೀರಣಗೊಳಿಸುವುದು ನಮ್ಮ ಗುರಿ ಎಂದು ತಿಳಿಸಿದರು.