ಸದೃಢ ಕರ್ನಾಟಕ ಕಟ್ಟಲು 24×7 ಕೆಲಸ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಸದೃಢ ಕರ್ನಾಟಕ ಕಟ್ಟಲು 24 ತಾಸುಗಳ ಕಾಲ ಕೆಲಸ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸರಕಾರ ಆರು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಇಂದು ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು ಕಿರುಹೊತ್ತಿಗೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪ್ರಾದೇಶಿಕ ಅಸಮತೋಲನ ನಿವಾರಣೆ :
ಕಲ್ಯಾಣ ಕರ್ನಾಟಕದ ಭಾಗದ ಅಭಿವೃದ್ಧಿಗಾಗಿ ₹ 1500 ಕೋಟಿ ಖರ್ಚು ಮಾಡಿದರೆ ಮುಂದಿನ ವರ್ಷದಲ್ಲಿ ₹ 3000 ಕೋಟಿಗಳ ಅನುದಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ. 14,000 ಹುದ್ದೆಗಳಿಗೆ ಆರ್ಥಿಕ ಮಂಜೂರಾತಿ ನೀಡಲಾಗಿದೆ ಎಂದರು.

ಸ್ಪಂದನಾಶೀಲ, ಸರ್ವಸ್ಪರ್ಶಿ ಸರಕಾರ:
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಸತಿ ಯೋಜನೆಗಳ ಬಾಕಿ ಇದ್ದ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಆರು ತಿಂಗಳಲ್ಲಿ ಹಲವಾರು ನಿರ್ಣಯಗಳಾಗಿವೆ.
ವಸ್ತುಸ್ಥಿತಿಯನ್ನು ಜನರ ಮುಂದಿಡುವ ಸಂದರ್ಭವಿದು. ಜನರ ಪರವಾಗಿ ಕೆಲಸಮಾಡುವ ಸರಕಾರ ಬಂದಿದೆ ಎಂದು ಜನರು ಹರಸುತ್ತಾರೆ. ಸ್ಪಂದನಾಶೀಲ, ಸರ್ವಸ್ಪರ್ಶಿ ಸರಕಾರವಾಗಿದ್ದು, ಕಟ್ಟಕಡೆಯ ವ್ಯಕ್ತಿಯ ಸ್ಥಾನದಲ್ಲಿ ಕುಳಿತು ಯೋಚಿಸುತ್ತಿದ್ದೇವೆ. ಅಭಿವೃದ್ಧಿಯಾಗಲು ಕಾನೂನು ಸುವ್ಯವಸ್ಥೆಯನ್ನು ಉತ್ತಮವಾಗಿರಬೇಕು. ಪೊಲೀಸ್ ಇಲಾಖೆ ಇದನ್ನು ಅತ್ಯುತ್ತಮವಾಗಿ ಮಾಡಿದ್ದಾರೆ ಎಂದರು.

ಯೋಜನೆಗಳ ಪರಿಣಾಮಗಳ ಅಧ್ಯಯನ:
ಸರಕಾರದ ಯೋಜನೆಗಳ ಪರಿಣಾಮಗಳ ಕುರಿತು ಅಧ್ಯಯನ ಮಾಡಿ ಅದರ ಪರಿಣಾಮಗಳ ಬಗ್ಗೆ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆ ಪುಸ್ತಕವನ್ನು ಹೊರತಂದಿದೆ. ಈ ಅಧ್ಯಯನವನ್ನು ಮುಂದುವರೆಸಿ, ಪ್ರತಿ ವಲಯದಲ್ಲಿ ಅದರ ಪರಿಣಾಮ, ಉತ್ತಮ ಅಂಶಗಳು ಹಾಗೂ ಕೊರತೆಗಳನ್ನು ಕಾಲಕಾಲಕ್ಕೆ ತಿಳಿಸುವಂತೆ ಮುಖ್ಯಮಂತ್ರಿಗಳು ಸಂಸ್ಥೆಯ ನಿರ್ದೇಶಕರಿಗೆ ತಿಳಿಸಿದರು.

ನಮ್ಮ ಗುರಿ ದೊಡ್ಡದು. ಇದರೊಂದಿಗೆ ಸವಾಲುಗಳೂ ಇವೆ. ಆದರೆ ಸವಾಲುಗಳನ್ನು ಎದುರಿಸುವ ಆತ್ಮಸ್ಥೈರ್ಯವೂ ನಮಗಿದೆ. ಭವಿಷ್ಯದ ಅಭಿವೃದ್ಧಿಗೆ ಭದ್ರ ಬುನಾದಿಯನ್ನು ಹಾಕಲಾಗಿದೆ. ಪ್ರತಿ ಹೆಜ್ಜೆಯನ್ನೂ ಆತ್ಮವಿಶ್ವಾಸದಿಂದ ಇಟ್ಟು ಜನರ ವಿಶ್ವಾಕ್ಕೆ ಧಕ್ಕೆ ಬಾರದಂತೆ ಕೆಲಸ ಮಾಡುವುದಾಗಿ ತಿಳಿಸಿದರು.

ಆಕ್ರಮಣಕಾರಿ ಆಡವಾಡಲು ಸಿದ್ಧ:
ಆಡಳಿತ ಫುಟ್ ಬಾಲ್ ಆಟವಿದ್ದಂತೆ. ಯಾರೂ ತಮ್ಮ ಹತ್ತಿರ ಹೆಚ್ಚು ಹೊತ್ತು ಚೆಂಡನ್ನು ಇಟ್ಟುಕೊಂಡಿರುವುದಿಲ್ಲ. ಸರಿಯಾದ ಸಮಯಕ್ಕೆ ಬೇರೆ ವ್ಯಕ್ತಿಗೆ ಚೆಂಡನ್ನು ಪಾಸ್ ಮಾಡುತ್ತಾರೆ. ಚೆಂಡು ಗೋಲ್ ತಲುಪಿಸುತ್ತಾರೆ. ಅದೇ ರೀತಿ ಆಡಳಿತವೂ ಕೂಡ ಎಂದು ಅವರು ಹೇಳಿದರು.

ನಮಗೆ ರಕ್ಷಣೆ ಹಾಗೂ ಆಕ್ರಮಣಕಾರಿ ಆಟವಾಡಲು ಗೊತ್ತಿದೆ. ನಮಗೆ ದೊರೆತಿರುವ ಅವಕಾಶವನ್ನು ಜನರ ಪರವಾಗಿ ಬಳಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!