Wednesday, July 6, 2022

Latest Posts

ಸಾಂಬಾರ ಪದಾರ್ಥಗಳ ಕಲಬೆರಕೆ ಮಾರಾಟ ತಡೆಗೆ ಕ್ರಮಕೈಗೊಳ್ಳಿ: ಸಂಸದ ಪ್ರತಾಪ್ ಸಿಂಹ ಸೂಚನೆ

ಹೊಸದಿಗಂತ ವರದಿ, ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ಜೇನುತುಪ್ಪ, ಸಂಬಾರ ಪದಾರ್ಥಗಳ ಕಲಬೆರಕೆ ಮಾರಾಟ ತಡೆಗಟ್ಟಲು ಕ್ರಮ ಕೈಗೊಳ್ಳಬೇಕು. ಆರೋಗ್ಯ ಇಲಾಖೆ ಪರಿಶೀಲನೆ ನಡೆಸಿ ಇಂತಹ ಅಂಗಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಸೂಚಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ರಸ್ತೆ ಬದಿಗಳಲ್ಲಿ ಜೇನುತುಪ್ಪ, ಕಾಚಿಪುಳಿ, ಸಂಬಾರ ಪದಾರ್ಥಗಳ ಕಲಬೆರಕೆ ಮಾಡಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇಂತಹ ಅಂಗಡಿಗಳ ತಪಾಸಣೆ ಮಾಡಿ ಪ್ರಯೋಗಾಲಯಕ್ಕೆ ಕಳುಹಿಸಿ ಪರಿಶೀಲನೆ ನಡೆಸಬೇಕು. ಕಲಬೆರಕೆ ಮಾಡುವ ಅಂಗಡಿಗಳನ್ನು ಬಂದ್ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಮೋದಿ ದೂರದೃಷ್ಟಿ ಕಾರಣ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೂಚನೆ ಮೇರೆಗೆ ರಾಜ್ಯದ 176 ತಾಲೂಕುಗಳಲ್ಲಿ ಆರೋಗ್ಯ ಮೇಳ ನಡೆಯುತ್ತಿದೆ. ಈ ಹಿಂದೆ ದೇಶದಲ್ಲಿ ಮಲೇರಿಯಾ, ಸಿಡುಬು, ಪ್ಲೇಗ್ ರೋಗ ಬಂದಾಗ 30,40 ವರ್ಷಗಳ ಬಳಿಕ ಭಾರತಕ್ಕೆ ಲಸಿಕೆ ಬರುತ್ತಿತ್ತು. ಅಮೆರಿಕಾ, ಇಂಗ್ಲೆಂಡ್, ರಷ್ಯಾದಂತಹ ಮುಂದುವರಿದ ದೇಶಗಳು ಮೊದಲು ತಮ್ಮ ದೇಶವಾಸಿಗಳಿಗೆ‌ ಲಸಿಕೆ ನೀಡಿದ ನಂತರ ಭಾರತಕ್ಕೆ ಕಳುಹಿಸಿಕೊಡುತ್ತಿದ್ದವು.ಆದರೆ 2020ರ ಮಾರ್ಚ್’ನಲ್ಲಿ ಕೋವಿಡ್ ರೋಗ ಬಂದ ನಂತರ ದೇಶದಲ್ಲಿಯೇ ಲಸಿಕೆ ತಯಾರಿಸಲು ಪ್ರೋತ್ಸಾಹ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಶೀಲ್ಡ್ ಹಾಗೂ ಕೊವ್ಯಾಕ್ಷಿನ್ ಲಸಿಕೆಯನ್ನು ದೇಶವಾಸಿಗಳಿಗೆ ನೀಡಲು ಕ್ರಮ ಕೈಗೊಳ್ಳುವ ಮೂಲಕ 130 ಕೋಟಿ ಜನರನ್ನು ರಕ್ಷಣೆ ಮಾಡಿದ್ದಾರೆ ಎಂದರು.
ಚೀನಾದ ವುಹಾನ್ ಸೇರಿದಂತೆ ಇತರ ನಗರಗಳಲ್ಲಿ ಕಾಣಿಕೊಂಡ ಕೊರೋನಾದಿಂದ ಅಲ್ಲಿನ‌ ಜನ ಈಗಾಲು ಭಯದ, ಉಸಿರುಗಟ್ಟಿದ ವಾತಾವರಣದಲ್ಲಿ ಪರಾದಾಡುತ್ತಿದ್ದಾರೆ. ಆದರೆ ನಮ್ಮ ದೇಶದಲ್ಲಿ ಮಾಸ್ಕ್ ಧರಿಸದೆ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಮೋದಿ ಅವರ ದೂರದೃಷ್ಟಿಯೇ ಕಾರಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೈಹಿಕ ಪರಿಶ್ರಮದ ಕೊರತೆ ಹಾಗೂ ಆಹಾರ ಪದ್ಧತಿಯಿಂದ ಯುವಜನಾಂಗದಲ್ಲಿ ಡಯಾಬಿಟಿಸ್’ನಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಪ್ರತಿಯೊಬ್ಬರಿಗೂ ಯೋಗ ರಾಮಬಾಣವಾಗಿದ್ದು, ಎಲ್ಲೆಡೆ ಯೋಗಾಭ್ಯಾಸ ಕಲಿಸಲಾಗುತ್ತಿದೆ. ಈ ಸಂದರ್ಭ ಆಯುಷ್ ಇಲಾಖೆ ಜಾಗೃತಿ ಮೂಡಿಸಬೇಕು ಎಂದರು.
ಜನರ ಆರೋಗ್ಯ ಸುಧಾರಣೆಗಾಗಿ ಆಯುಷ್ಮಾನ್ ಕಾರ್ಡ್ ಎಲ್ಲರಿಗೂ ತಲುಪಿಸಬೇಕು. ಪಂಚಾಯಿತಿ ಮಟ್ಟದಲ್ಲಿ ಶಿಬಿರ ಮಾಡಿ ವಿತರಣೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಾಪ್ ಸಿಂಹ ಸಲಹೆ ನೀಡಿದರು.
ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅಧ್ಯಕ್ಷತೆ ವಹಿಸಿ, ಪ್ರತಿಯೊಬ್ಬರೂ ತಮ್ಮ ಆರೋಗ್ಯ ಸುಧಾರಣೆಗೆ ವಿಶೇಷ ಗಮನ ಹರಿಸಬೇಕು. ಕಾಯಿಲೆ ಬರುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕು. ಆಹಾರ ಮಿತವಾಗಿ ತೆಗೆದುಕೊಳ್ಳಬೇಕು. ನೈಸರ್ಗಿಕ, ಸಾವಯವ ಆಹಾರ ಉಪಯೋಗಿಸಬೇಕು. ಹೂ ತೋಟದಲ್ಲಿ ತರಕಾರಿ ಬೆಳೆಸಬೇಕು ಎಂದರು.
ಆರೋಗ್ಯ ಸುಧಾರಣೆಗಾಗಿ ಮೇಳಗಳ ಆಯೋಜನೆ ಮಾಡಲಾಗುತ್ತಿದೆ. ಆಯುಷ್ಮಾನ್ ಕಾರ್ಡ್’ಗೆ ರೂ.5 ಲಕ್ಷದವರೆಗೆ ಚಿಕಿತ್ಸಾ ಸೌಲಭ್ಯ ಇದೆ. ಸಾರ್ವಜನಿಕರು ಮೇಳದ ಪ್ರಯೋಜನ ಪಡೆದು ರೋಗಗಳಿಂದ‌ ಮುಕ್ತರಾಗಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ.ಜೈವರ್ಧನ್, ಉಪಾಧ್ಯಕ್ಷೆ ಸುರಯ್ಯಬಾನು, ಸೋಮವಾರಪೇಟೆ ಪ.ಪಂ.ಅಧ್ಯಕ್ಷ ಪಿ.ಕೆ.ಚಂದ್ರು, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಎಲ್.ಶ್ರೀನಿವಾಸ್, ತಾಲೂಕು ತಹಶೀಲ್ದಾರ್ ಆರ್.ಗೋವಿಂದರಾಜು, ಟಿ.ಎಂ.ಪ್ರಕಾಶ್, ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ. ಜಯಣ್ಣ, ಮಡಿಕೇರಿ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ವಿಶಾಲ್ ಕುಮಾರ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ, ವೈದ್ಯರು, ಆರೋಗ್ಯ ಸಿಬ್ಬಂದಿಗಳು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss