ಹೊಸದಿಗಂತ ವರದಿ, ಕಾರವಾರ:
ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ತಾಲೂಕಿನ ಶಿರವಾಡದ ಹಿಂದು ಪರ ಹೋರಾಟಗಾರ ಮಾರುತಿ ನಾಯ್ಕ ಅವರ ಮನೆಗೆ ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಅವರು ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಿರುಕುಳ ತಾಳಲಾರದೆ ಒಬ್ಬ ವ್ಯಕ್ತಿ ಆತ್ಮಹತ್ಯೆಯ ದೃಡ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರೆ ಆರೋಪಿಗಳು ಮತ್ತು ಪೊಲೀಸರು ಅವರಿಗೆ ಯಾವ ಪರಿಯ ಹಿಂಸೆ ನೀಡಿರಬಹುದು ಎಂದು ಊಹಿಸಲು ಸಾಧ್ಯವಿಲ್ಲ ಎಂದರು.
ಭಾರತೀಯ ಜನತಾ ಪಕ್ಷ ಮಾರುತಿ ನಾಯ್ಕ ಅವರ ಕುಟುಂಬದೊಂದಿಗೆ ಸದಾ ಇರುವುದಾಗಿ ತಿಳಿಸಿದ ಅವರು ನಂತರ ಜಿಲ್ಲಾ ಪೊಲೀಸ್ ವರಿಷ್ಠ ವಿಷ್ಣುವರ್ಧನ್ ಅವರನ್ನು ಭೇಟಿಯಾಗಿ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಿ ಮಾರುತಿ ನಾಯ್ಕ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಕಾರವಾರ ತಾಲೂಕಿನ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.
ಶಿರವಾಡದ ಸುತ್ತ ಮುತ್ತಲಿನ ಜನತೆ ಮಾರುತಿ ನಾಯ್ಕ ಸಾವಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಮೇಣದ ಬತ್ತಿ ಹಿಡಿದು ಶಾಂತ ಪ್ರತಿಭಟನಾ ಮೆರವಣಿಗೆ ನಡೆಸಿದರು.