5 ವರ್ಷಗಳಲ್ಲಿ ₹ 1,600 ಕೋಟಿ ಅನುದಾನದಲ್ಲಿ ʻಆಯುಷ್ಮಾನ್ ಭಾರತ್ ಡಿಜಿಟಲ್ ಯೋಜನೆʼಗೆ ಸಂಪುಟ ಅಂಗೀಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೇಂದ್ರ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ʻಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್‌ʼ (ಎಬಿಡಿಎಂ) ಕೇಂದ್ರ ವಲಯದ ಯೋಜನೆಯನ್ನು ಐದು ವರ್ಷಗಳ ಅವಧಿಗೆ ₹ 1,600 ಕೋಟಿಗಳ ಅನುದಾನದೊಂದಿಗೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಿದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವು (ಎನ್‌ಎಚ್‌ಎ) ಆಯುಷ್ಮಾನ್ ಭಾರತ್ ಡಿಜಿಟಲ್ ಯೋಜನೆಯ (ಎಬಿಡಿಎಂ) ಅನುಷ್ಠಾನ ಸಂಸ್ಥೆಯಾಗಿದೆ.

ಆರೋಗ್ಯ ಪರಿಸರ ವ್ಯವಸ್ಥೆಯಾದ್ಯಂತ ಕಳೆದ ಹಲವು ವರ್ಷಗಳಲ್ಲಿ ಕಲ್ಪಿಸಲಾದ ಡಿಜಿಟಲ್ ಆರೋಗ್ಯ ಪರಿಹಾರಗಳು ಅಪಾರ ಪ್ರಯೋಜನವನ್ನು ನೀಡಿರುವುದು ಸಾಬೀತಾಗಿದೆ. ʻಕೋವಿನ್ʼ, ʻಆರೋಗ್ಯ ಸೇತುʼ ಮತ್ತು ʻಇ-ಸಂಜೀವನಿʼ ವ್ಯವಸ್ಥೆಗಳು ಆರೋಗ್ಯ ಆರೈಕೆಯ ಲಭ್ಯತೆಯನ್ನು ವಿಸ್ತರಿಸುವಲ್ಲಿ ತಂತ್ರಜ್ಞಾನವು ವಹಿಸಬಹುದಾದ ಪಾತ್ರವನ್ನು ಮತ್ತಷ್ಟು ಸಾಬೀತುಪಡಿಸಿವೆ. ಅದಾಗ್ಯೂ ಆರೈಕೆಯ ನಿರಂತರತೆ ಮತ್ತು ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಗಾಗಿ ಅಂತಹ ಪರಿಹಾರಗಳನ್ನು ಸಂಯೋಜಿಸುವ ಅಗತ್ಯವಿದೆ.

ʻಜನ್ ಧನ್, ಆಧಾರ್ ಮತ್ತು ಮೊಬೈಲ್ ʼ(ಜೆಎಎಂ) ತ್ರಿವಳಿ ಸಂಯೋಜನೆ ಮತ್ತು ಸರಕಾರದ ಇತರ ಡಿಜಿಟಲ್ ಉಪಕ್ರಮಗಳ ರೂಪದಲ್ಲಿ ರೂಪಿಸಲಾದ ಅಡಿಪಾಯಗಳ ಆಧಾರದ ಮೇಲೆ, ʻಆಯುಷ್ಮಾನ್ ಭಾರತ್ ಡಿಜಿಟಲ್ ಯೋಜನೆʼಯು (ಎಬಿಡಿಎಂ) ವ್ಯಾಪಕ ಶ್ರೇಣಿಯ ಡೇಟಾ, ಮಾಹಿತಿ ಮತ್ತು ಮೂಲಸೌಕರ್ಯ ಸೇವೆಗಳನ್ನು ಒದಗಿಸುವ ಮೂಲಕ ತಡೆರಹಿತ ಆನ್ ಲೈನ್ ವೇದಿಕೆಯನ್ನು ಸೃಷ್ಟಿಸುತ್ತಿದೆ. ಆರೋಗ್ಯ ಸಂಬಂಧಿತ ವೈಯಕ್ತಿಕ ಮಾಹಿತಿಯ ಗೋಪ್ಯತೆ ಮತ್ತು ಭದ್ರತೆಯ ಖಾತರಿಯೊಂದಿಗೆ ಮುಕ್ತ, ಪರಸ್ಪರ ಕಾರ್ಯನಿರ್ವಹಿಸಬಲ್ಲ, ಮಾನದಂಡ ಆಧಾರಿತ ಡಿಜಿಟಲ್ ವ್ಯವಸ್ಥೆಗಳನ್ನು ಇದು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ.

ʻಎಬಿಡಿಎಂʼ ಅಡಿಯಲ್ಲಿ, ನಾಗರಿಕರು ತಮ್ಮ ʻಎಬಿಎಚ್ಎʼ (ಆಯುಷ್ಮಾನ್ ಭಾರತ್ ಆರೋಗ್ಯ ಖಾತೆ) ಸಂಖ್ಯೆಗಳನ್ನು ಸೃಷ್ಟಿಸಿ, ಅದಕ್ಕೆ ಅವರ ಡಿಜಿಟಲ್ ಆರೋಗ್ಯ ದಾಖಲೆಗಳನ್ನು ಲಿಂಕ್ ಮಾಡಲು ಸಾಧ್ಯವಾಗಲಿದೆ. ಇದು ವಿವಿಧ ಆರೋಗ್ಯ ಆರೈಕೆ ಪೂರೈಕೆದಾರ ಬಳಕೆಗಾಗಿ ವ್ಯಕ್ತಿಗಳ ದೀರ್ಘಕಾಲೀನ ಆರೋಗ್ಯ ದಾಖಲೆಗಳನ್ನು ಸೃಷ್ಟಿಸಲು ಅನುವು ಮಾಡಿಕೊಡುತ್ತದೆ. ಜೊತೆಗೆ ಆರೋಗ್ಯ ಆರೈಕೆ ಪೂರೈಕೆದಾರು ಚಿಕಿತ್ಸಾತ್ಮಕ ನಿರ್ಧಾರ ಕೈಗೊಳ್ಳುವುದನ್ನು ಸುಲಭಗೊಳಿಸುತ್ತದೆ. ಟೆಲಿಮೆಡಿಸಿನ್ ನಂತಹ ತಂತ್ರಜ್ಞಾನಗಳ ಬಳಕೆಯನ್ನು ಪ್ರೋತ್ಸಾಹಿಸುವ ಮೂಲಕ ಮತ್ತು ಆರೋಗ್ಯ ಸೇವೆಗಳ ರಾಷ್ಟ್ರೀಯ ಪೋರ್ಟಬಿಲಿಟಿಯನ್ನು ಸಕ್ರಿಯಗೊಳಿಸುವ ಮೂಲಕ ಗುಣಮಟ್ಟದ ಆರೋಗ್ಯ ರಕ್ಷಣೆಯ ಸಮಾನ ಲಭ್ಯತೆಯನ್ನು ಈ ಯೋಜನೆ ಸುಧಾರಿಸುತ್ತದೆ.

ʻಎನ್‌ಎಚ್‌ಎʼ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ವೇದಿಕೆಯ ಯಶಸ್ವಿ ಪ್ರದರ್ಶನದೊಂದಿಗೆ ಆರು ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್, ಚಂಡೀಗಢ, ದಾದ್ರಾ ಮತ್ತು ನಗರ್‌ಹವೇಲಿ, ಡಿಯು ಮತ್ತು ಡಮನ್‌, ಪುದುಚೇರಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪಗಳಲ್ಲಿ ʻಎಬಿಡಿಎಂʼ ಪ್ರಾಯೋಗಿಕ ಅನುಷ್ಠಾನ ಪೂರ್ಣಗೊಳಿಸಲಾಯಿತು. ಈ ಅವಧಿಯಲ್ಲಿ ʻಡಿಜಿಟಲ್ ಸ್ಯಾಂಡ್ ಬಾಕ್ಸ್ʼ ಅನ್ನು ರಚಿಸಲಾಯಿತು. ಇದರಲ್ಲಿ 774ಕ್ಕೂ ಹೆಚ್ಚು ಪಾಲುದಾರ ಪರಿಹಾರಗಳು ಸಂಯೋಜನೆಗೊಂಡಿವೆ. ಫೆಬ್ರವರಿ 24ರ ಪ್ರಕಾರ, 17,33,69,087 ಆಯುಷ್ಮಾನ್ ಭಾರತ್ ಆರೋಗ್ಯ ಖಾತೆಗಳನ್ನು ಸೃಷ್ಟಿಸಲಾಗಿದೆ. ಇದರಲ್ಲಿ 10,114 ವೈದ್ಯರು ಮತ್ತು 17,319 ಆರೋಗ್ಯ ಕೇಂದ್ರಗಳು ʻಎಬಿಡಿಎಂʼನಲ್ಲಿ ನೋಂದಾಯಿಸಿಕೊಂಡಿವೆ.

ʻಎಬಿಡಿಎಂʼ ಕೇವಲ ಪರಿಣಾಮಕಾರಿ ಸಾರ್ವಜನಿಕ ಆರೋಗ್ಯ ಹಸ್ತಕ್ಷೇಪಗಳಿಗಾಗಿ ಸಾಕ್ಷ್ಯಾಧಾರಿತ ನಿರ್ಧಾರ ಕೈಗೊಳ್ಳುವಿಕೆಗೆ ಅನುಕೂಲ ಮಾಡಿಕೊಡುವುದಷ್ಟೇ ಅಲ್ಲದೆ, ಇದು ನಾವಿನ್ಯತೆಯನ್ನು ವೇಗಗೊಳಿಸುತ್ತದೆ ಮತ್ತು ಆರೋಗ್ಯ ಪರಿಸರ ವ್ಯವಸ್ಥೆಯಾದ್ಯಂತ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!