Tuesday, September 9, 2025

ಆಂಜನೇಯ ಸ್ವಾಮಿ ದೇಗುಲ ನಿರ್ಮಾಣಕ್ಕಾಗಿ 1.83 ಲಕ್ಷ ರೂ. ದೇಣಿಗೆ ಕೊಟ್ಟ ಭಿಕ್ಷುಕಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಧನಿಕರೂ ದೇಗುಲಕ್ಕಾಗಿ ನೂರು ರೂಪಾಯಿ ದೇಣಿಗೆ ನೀಡುವ ಈ ಕಾಲದಲ್ಲಿ ಭಿಕ್ಷುಕಿಯೊಬ್ಬರು ದೇಗುಲ ನಿರ್ಮಾಣಕ್ಕೆ ಲಕ್ಷ ದೇಣಿಗೆ ನೀಡಿದ್ದಾರೆ.

ಆಂಜನೇಯ ದೇಗುಲ ನಿರ್ಮಾಣಕ್ಕಾಗಿ ವಯಸ್ಸಾದ ಭಿಕ್ಷುಕಿಯೊಬ್ಬರು 1.83 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಅಚ್ಚರಿ ಮೂಡಿಸಿರುವ ಘಟನೆ ರಾಯಚೂರುತಾಲೂಕಿನ ಬಿಜನಗೇರಾ ಗ್ರಾಮದಲ್ಲಿ ನಡೆದಿದೆ.

60 ವರ್ಷದ ರಂಗಮ್ಮ ಎಂಬುವವರು ಭಿಕ್ಷೆಯಿಂದ ಬಂದ ಹಣದಲ್ಲೇ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿದ್ದಾರೆ. ಸುಮಾರು 30 ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ಬಂದು ಬಿಜನಗೇರಾ ಗ್ರಾಮದಲ್ಲಿ ಏಕಾಂಗಿಯಾಗಿ ವಾಸಿಸುತ್ತಿರುವ ರಂಗಮ್ಮ ಭಿಕ್ಷುಕಿಯಾದ್ರು ಮಹಾದಾನಿಯಾಗಿದ್ದಾಳೆ.

ಯಾರ ಬಳಿಯೂ ಮಾತನಾಡದ ವೃದ್ಧೆ ಡಬ್ಬಿ, ಗಂಟುಗಳಲ್ಲಿ ಕೂಡಿಟ್ಟಿದ್ದ ಹಣ ಆಕಸ್ಮಿಕವಾಗಿ ಗ್ರಾಮಸ್ಥರ ಕಣ್ಣಿಗೆ ಬಿದ್ದಿದೆ. ಗ್ರಾಮಸ್ಥರೇ ಹಣವನ್ನ ಎಣಿಸಿ, ಈ ಹಣ ಏನು ಮಾಡುತ್ತಿಯಾ ಅಂತ ವೃದ್ಧೆಯನ್ನ ಕೇಳಿದ್ದಾರೆ. ಆಗ ಅವರು ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ ನಾಲ್ಕು ವರ್ಷಗಳ ಹಿಂದೆ ವೃದ್ಧೆಯ ಬಳಿ 30 ಸಾವಿರ ರೂ. ಇರುವುದನ್ನ ಗಮನಿಸಿದ ಗ್ರಾಮಸ್ಥರು ಪುಟ್ಟ ಸೂರನ್ನ ನಿರ್ಮಿಸಿ ಕೊಟ್ಟಿದ್ದರು. 4*5 ಅಡಿ ಸೂರಿನಲ್ಲೇ ಇರುವ ರಂಗಮ್ಮಳಿಗೆ ಜನ ಇದ್ದಲ್ಲಿಗೆ ಬಂದು ಭಿಕ್ಷೆ ಕೊಟ್ಟು ಹೋಗುತ್ತಾರೆ. ಊರಿನವರೇ ಸೀರೆ, ಊಟ ಕೊಡುತ್ತಿದ್ದಾರೆ.

ದಾರಿಹೋಕರು, ಆಟೋ ರಿಕ್ಷಾ ಚಾಲಕರು, ಟಂಟಂ ಚಾಲಕರು ವೃದ್ಧೆಗೆ ಹಣ ನೀಡಿದರೆ ತಮ್ಮ ವ್ಯಾಪಾರ ಜೋರಾಗಿ ನಡೆಯುತ್ತದೆ ಎಂದು ನಿತ್ಯ ಹತ್ತು, ಇಪ್ಪತ್ತು, ನೂರು ರೂಪಾಯಿ ಸೇರಿ ತಿಳಿದಷ್ಟು ಕೊಡುತ್ತಾರೆ. ಈ ಭಿಕ್ಷೆಯ ಹಣವನ್ನೇ ವೃದ್ಧೆ ದೇವಸ್ಥಾನದ ನಿರ್ಮಾಣಕ್ಕೆ ತನ್ನ ಸೇವೆಯೂ ಇರಲಿ ಅಂತ ನೀಡಿದ್ದಾರೆ. ದೇವಸ್ಥಾನಗಳ ಮುಂದೆ ಸಾಮಾನ್ಯವಾಗಿ ಭಿಕ್ಷುಕರು ಕಾಣುತ್ತಾರೆ ಆದ್ರೆ ಇಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಭಿಕ್ಷುಕಿಯೊಬ್ಬರು ದೇಣಿಗೆ ನೀಡಿದ್ದಾರೆ.

ಇದನ್ನೂ ಓದಿ