ಹೊಸದಿಗಂತ ಡಿಜಿಟಲ್ ಡೆಸ್ಕ್:
ನಕ್ಸಲಿಸಂ ಮುಕ್ತ ಭಾರತ ನಿರ್ಮಾಣದತ್ತ ದಿಟ್ಟ ಹೆಜ್ಜೆ ಇಡುತ್ತಿರುವ ಮೋದಿ ಸರಕಾರದ ಶ್ರಮಕ್ಕೆ ದೊಡ್ಡ ಪ್ರತಿಫಲ ಸಿಗುತ್ತಿದ್ದು, ಛತ್ತೀಸ್ಗಢದ ಬಸ್ತರ್ ಪ್ರದೇಶದಲ್ಲಿ ನಕ್ಸಲಿಸಂ ಬಹುತೇಕ ಅಂತ್ಯಗೊಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ನಕ್ಸಲಿಸಂ ಮುಕ್ತಗೊಳಿಸವಲ್ಲಿ ನಡೆದು ಬಂದ ಹಾದಿಗಳನ್ನು ವಿವರಿಸಿದರು.
ಕಳೆದ 12 ವರ್ಷಗಳಲ್ಲಿ ಮೋದಿ ಸರಕಾರ ಮಾಡಿದ ಅಭಿವೃದ್ಧಿ ಕೆಲಸಗಳಿಂದ ಇಂದು ನಕ್ಸಲ್ ವಾದ ಮುಕ್ತವಾಗುತ್ತಿದೆ. ಈ ಯಶಸ್ಸಿನ ಹಿಂದೆ ಇರುವ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಪಡೆಗಳು ಮತ್ತು ವಿವಿಧ ರಾಜ್ಯಗಳ ಪೊಲೀಸರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಒಂದು ವೇಳೆ ಯಾರಾದರೂ ಶಸ್ತ್ರಾಸ್ತ್ರ ಹಿಡಿದು ವ್ಯವಸ್ಥೆಯ ವಿರುದ್ಧ ನಿಂತರೆ ತಕ್ಕ ಪಾಠ ಕಲಿಸಲಾಗುವುದು . ಮೋದಿ ಸರ್ಕಾರವು ಅಂತಹವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಎಂದು ಅಮಿತ್ಶಾ ಎಚ್ಚರಿಸಿದ್ದಾರೆ.
ಸ್ವಾತಂತ್ರ್ಯ ಬಂದು 75 ವರ್ಷಗಳಲ್ಲಿ 60 ವರ್ಷಗಳ ಕಾಲ ದೇಶವನ್ನು ಕಾಂಗ್ರೆಸ್ ಆಡಳಿತ ನಡೆಸುತ್ತಿತ್ತು. ಈ ವೇಳೆ ನಕ್ಸಲ್ ವಾದ ಮುಕ್ತವಾಗಲಿಲ್ಲ? ಅಂದು ಅವರೇಕೆ ಬುಡಕಟ್ಟು ಜನಾಂಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಲಿಲ್ಲ ಎಂದು ಕಾಂಗ್ರೆಸ್ ಸಂಸದರನ್ನು ಕೇಳಲು ಬಯಸುತ್ತೇನೆ ಎಂದು ಚಾಟಿ ಬೀಸಿದರು .
1970 ರಿಂದ 2004 ರವರೆಗೆ ಕಾಂಗ್ರೆಸ್ ಅತೀ ಹೆಚ್ಚು ಸಮಯ ಅಧಿಕಾರದಲ್ಲಿತ್ತು. ಅಂದು ಇಂದಿರಾ ಗಾಂಧಿ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಲು ಘೋಷಣೆ ಕೂಗಿದ್ದು, 12 ರಾಜ್ಯಗಳಿಗೆ ನಕ್ಸಲ್ ವಾದ ಹರಡಿದ ಸಮಯ ಎಂದು ಶಾ ಹಿಂದಿನ ಘಟನೆ ವಿವರಿಸಿದರು.
ಇಂದು ಬಸ್ತಾರ್ ಅಭಿವೃದ್ಧಿಯ ಹಾದಿಯಲ್ಲಿ ಮುಂದುವರಿಯುತ್ತಿದೆ . ಪ್ರತಿಯೊಂದು ಹಳ್ಳಿಯಲ್ಲಿ ಶಾಲೆಗಳನ್ನು ಸ್ಥಾಪಿಸುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಪ್ರತಿಯೊಂದು ಹಳ್ಳಿಯಲ್ಲಿ ಪಡಿತರ ಅಂಗಡಿಗಳು ತೆರೆಯುತ್ತಿದೆ. ಪ್ರತಿ ಪಂಚಾಯತ್ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಂದು ಜನರು ಮುಕ್ತವಾಗಿ ಆಧಾರ್ ಕಾರ್ಡ್ಗಳು ಮತ್ತು ಪಡಿತರ ಚೀಟಿಗಳನ್ನು ಪಡೆಯುತ್ತಾರೆ ಎಂದು ವಿವರಿಸಿದರು.



