ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡ ತವರಿನಲ್ಲೇ ಬಾಂಗ್ಲಾದೇಶ ವಿರುದ್ಧ 10 ವಿಕೆಟ್ಗಳ ಹೀನಾಯ ಸೋಲು ಕಂಡಿದೆ. ಅಲ್ಲದೇ ಪಾಕ್ ನೆಲದಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಮೂಲಕ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡ ಮೊದಲ ಇನ್ನಿಂಗ್ಸ್ನಲ್ಲಿ 6 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.
ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್ನಲ್ಲಿ 167.3 ಓವರ್ಗಳಲ್ಲಿ 565 ರನ್ ಪೇರಿಸಿತ್ತು. ಬ್ಯಾಟಿಂಗ್ನಲ್ಲಿ ಮೊದಲ ಇನಿಂಗ್ಸ್ನಲ್ಲಿ ಪಾಕ್ ಬೌಲರ್ಗಳ ಮೇಲೆ ಸವಾರಿ ಮಾಡಿದ್ದ ಅನುಭವಿ ಆಟಗಾರ ಮುಶ್ಫಿಕರ್ ರಹೀಂ 191 ರನ್ ಬಾರಿಸಿದ್ದರು. ಅವರ ಈ ಭರ್ಜರಿ ಆಟ ಬಾಂಗ್ಲಾ ತಂಡಕ್ಕೆ ಮೇಲುಗೈ ಸಾಧಿಸುವಂತೆ ಮಾಡಿತು.
ಇನ್ನೂ 4ನೇ ದಿನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನ 146 ರನ್ಗಳಿಗೆ ಸರ್ವಪತನ ಕಂಡಿತು. ಪಾಕ್ ಪರ ದ್ವಿತೀಯ ಇನ್ನಿಂಗ್ಸ್ನಲ್ಲಿ ಮೊಹಮ್ಮದ್ ರಿಜ್ವಾನ್ 51 ರನ್, ಅದ್ಭುಲ್ ಶಫಿಕ್ 37 ರನ್, ಬಾಬರ್ ಆಜಂ 22 ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಅಲ್ಪಮೊತ್ತಕ್ಕೆ ನೆಲ ಕಚ್ಚಿದ್ದರು. ಇದರಿಂದ ಗೆಲುವಿಗೆ ಕೇವಲ 30 ರನ್ ಗುರಿ ಪಡೆದ ಬಾಂಗ್ಲಾದೇಶ ವಿಕೆಟ್ ನಷ್ಟವಿಲ್ಲದೇ ಗೆಲುವು ಸಾಧಿಸಿತು. ಅತಿಯಾದ ಆತ್ಮವಿಶ್ವಾಸವೇ ಪಾಕ್ ತಂಡದ ಸೋಲಿಗೆ ಕಾರಣವಾಯಿತು.