ಮುಂದಿನ ಜಿ20ಗೆ ಭಾರತದ ಸಾರಥ್ಯ: ಅಧ್ಯಕ್ಷ ಸ್ಥಾನ ಅಧಿಕೃತವಾಗಿ ಸ್ವೀಕರಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಧವಾರ ಬಾಲಿಯಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಅವರಿಂದ ಅಧಿಕೃತವಾಗಿ ಸ್ವೀಕರಿಸಿದರು.

ಈ ಮೂಲಕ ಭಾರತಕ್ಕೆ ಅಧಿಕೃತವಾಗಿ ಜಿ20 ಶೃಂಗಸಭೆಯ ಅಧ್ಯಕ್ಷ ಸ್ಥಾನ ಹಸ್ತಾಂತರವಾಗಿದೆ.ಡಿಸೆಂಬರ್‌ 1 ರಿಂದ ಭಾರತ ಅಧಿಕೃತವಾಗಿ ಜಿ20ಯ ಅಧ್ಯಕ್ಷ ಸ್ಥಾನದಲ್ಲಿ ಆಸೀನವಾಗಲಿದೆ.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಭಾರತ ಜಿ 20 ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ನಾವು ಭಾರತದ ವಿವಿಧ ರಾಜ್ಯಗಳು ಮತ್ತು ನಗರಗಳಲ್ಲಿ ಜಿ 20 ಸಭೆಗಳನ್ನು ಆಯೋಜಿಸುತ್ತೇವೆ. ಒಟ್ಟಾಗಿ ನಾವು ಜಿ 20 ಅನ್ನು ಜಾಗತಿಕ ಬದಲಾವಣೆಗೆ ವೇಗವರ್ಧಕವಾಗಿ ಮಾಡುತ್ತೇವೆ ಎಂದು ಹೇಳಿದರು.

ಜಿ-20 ಅಧ್ಯಕ್ಷ ಸ್ಥಾನದ ಥೀಮ್ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯವನ್ನು ಹೈಲೈಟ್ ಮಾಡಿದ ಮೋದಿ ನಮ್ಮ ಮುಂದಿನ ಪೀಳಿಗೆಗಳು ಶಾಂತಿ ಮತ್ತು ಭದ್ರತೆಯಿಲ್ಲದೆ ಆರ್ಥಿಕ ಬೆಳವಣಿಗೆ ಅಥವಾ ತಾಂತ್ರಿಕ ಆವಿಷ್ಕಾರದ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಜಗತ್ತು ಏಕಕಾಲದಲ್ಲಿ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಆರ್ಥಿಕ ಮಂದಗತಿ, ಆಹಾರ ಮತ್ತು ಇಂಧನ ಬೆಲೆಗಳ ಏರಿಕೆ ಮತ್ತು ದೀರ್ಘಾವಧಿಯ ಸಾಂಕ್ರಾಮಿಕದ ದುಷ್ಪರಿಣಾಮಗಳೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ ಭಾರತವು G-20 ನ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದೆ. ಅಂತಹ ಸಮಯದಲ್ಲಿ ಜಗತ್ತು ಜಿ -20 ಅನ್ನು ಭರವಸೆಯಿಂದ ನೋಡುತ್ತಿದೆ ಎಂದು ಮೋದಿ ಹೇಳಿದ್ದಾರೆ.

ಹಸ್ತಾಂತರ ಸಮಾರಂಭದೊಂದಿಗೆ ಎರಡು ದಿನಗಳ ಜಿ20 ಶೃಂಗಸಭೆ ಕೊನೆಗೊಂಡಂತಾಗಿದೆ. ಎಲ್ಲಾ ಸದಸ್ಯ ರಾಷ್ಟ್ರಗಳು ಜಂಟಿ ಘೋಷಣೆಯನ್ನು ಅಂತಿಮ ಮಾಡುವುದರೊಂದಿಗೆ ಬಾಲಿ ಶೃಂಗಸಭೆ ಕೊನೆಗೊಂಡಿದೆ.

ಜಿ20ಯಲ್ಲಿ ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ದಕ್ಷಿಣ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಯುಕೆ, ಯುಎಸ್ ಮತ್ತು ಯುರೋಪಿಯನ್ ಯೂನಿಯನ್ ಅನ್ನು ಒಳಗೊಂಡಿದೆ. ಒಟ್ಟಾರೆಯಾಗಿ, ಅವರು ಜಾಗತಿಕ ಜಿಡಿಪಿ ಯ 80 ಪ್ರತಿಶತದಷ್ಟು, ಅಂತಾರಾಷ್ಟ್ರೀಯ ವ್ಯಾಪಾರದ 75 ಪ್ರತಿಶತ ಮತ್ತು ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಭಾಗವನ್ನು ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!