ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನದಲ್ಲಿ ಗೆಲುವು: ಸಿಎಂ.ಸಿದ್ದರಾಮಯ್ಯ ವಿಶ್ವಾಸ

ಹೊಸದಿಗಂತ ವರದಿ, ಚಿತ್ರದುರ್ಗ:

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಹೊರವಲಯದ ಮಾದಾರ ಚೆನ್ನಯ್ಯ ಗುರುಪೀಠದ ಪಕ್ಕದ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಶೋಷಿತರ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭ  ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾವು ಬಿಜೆಪಿ ನಾಯಕರ ರೀತಿ 28ಕ್ಕೆ 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ ಎಂದು ಸುಳ್ಳು ಹೇಳುವುದಿಲ್ಲ. ನಾವು 15 ರಿಂದ 20 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದೇವೆ ಎಂದು ಹೇಳಿದರು.

ಇಂಡಿಯಾ ಮೈತ್ರಿ ಕೂಟದಲ್ಲಿ ನಿತೀಶ್ ಮತ್ತು ಮಮತಾ ಅವರು ನಿಮ್ಮ ಮೈತ್ರಿಯನ್ನು ತೊರೆಯುತ್ತಿದ್ದಾರೆ. ಒಂದು ಕಡೆ ನೀವು ಬಲಗೊಳಿಸುತ್ತಿದ್ದರೆ ಮತ್ತೊಂದು ಕಡೆ ಹೀಗೆ ನಾಯಕರು ಮೈತ್ರಿ ತೊರೆಯುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲವನ್ನೂ ಕೇಂದ್ರದ ನಾಯಕರಾದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸೋನಿಯಾ ಗಾಂಧಿಯವರು ನೋಡಿಕೊಳ್ಳುತ್ತಾರೆ ಎಂದು ಉತ್ತರಿಸಿದರು.

ನಾನು ಮಂತ್ರಿಯಾಗಿದ್ದಾಗ ಕಾಂತರಾಜ್ ವರದಿ ಪೂರ್ಣವಾಗಿರಲಿಲ್ಲ. ಇದಾದ ಮೇಲೆ ಸಮ್ಮಿಶ್ರ ಸರ್ಕಾರ ಜಾರಿಗೆ ಬಂತು. ಆಗ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ಇದಾದ ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು. ಈಗ ವರದಿ ಕೊಟ್ಟರೆ ಸ್ವೀಕರಿಸುತ್ತೇವೆ. ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಕಾಂತರಾಜು ವರದಿ ಕೊಟ್ಟ ಮೇಲೆ ಚರ್ಚೆ ಮಾಡೋಣ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಅಧಿಕಾರಿಗಳು ಹನುಮಾ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭೇಟಿ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ , ಆ ಧ್ವಜ, ಈ ಧ್ವಜ ಹಾರಿಸುವುದರ ಬದಲಾಗಿ ನಮ್ಮ ದೇಶದ ಬಾವುಟವನ್ನು ಹಾರಿಸಬೇಕು. ಅಂದಾಗ ಯಾವುದೇ ಗೊಂದಲ ಇರುವುದಿಲ್ಲ. ಅನಗತ್ಯವಾಗಿ ಈ ರೀತಿ ಮಾಡುವುದು ಸರಿಯಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!