ಫೆ.2ರಿಂದ ‘ಹಂಪಿ ಉತ್ಸವ’: ಮರುಕಳಿಸಲಿದೆ ವಿಜಯನಗರ ಸಾಮ್ರಾಜ್ಯದ ಗತ ಕಾಲದ ಸಾಂಸ್ಕೃತಿಕ ವೈಭವ

ಹೊಸ ದಿಗಂತ ಡಿಜಿಟಲ್ ಡೆಸ್ಕ್ , ವಿಜಯನಗರ:

ರಾಜ್ಯ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದಿಂದ ಫೆ.2 ರಿಂದ 4ರವರೆಗೆ ಮೂರು ದಿನಗಳ ಕಾಲ ಹೊಸಪೇಟೆ ತಾಲೂಕಿನ ವಿಶ್ವವಿಖ್ಯಾತ ಹಂಪಿಯಲ್ಲಿ ಆಯೋಜಿಸಿರುವ ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಮೂರು ದಿನಗಳ ಉತ್ಸವದಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಟ, ನಟಿಯರು ಹಾಗೂ ಸಂಗೀತ ಕಲಾವಿದರು ಪಾಲ್ಗೊಂಡು ಸಂಗೀತದ ರಸದೌತಣ ನೀಡುವರು.

ಫೆ.2 ರಂದು ಸಂಜೆ 7.30ಕ್ಕೆ ಗಾಯತ್ರಿ ಪೀಠ ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್, ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಸೇರಿದಂತೆ ಮತ್ತಿತರೆ ಸಚಿವರು, ಸ್ಥಳೀಯ ಶಾಸಕರು ಪಾಲ್ಗೊಳ್ಳುವರು.

ಬಳಿಕ ವಿದ್ವಾನ್ ಪ್ರವೀಣ್ ಗೋಡಕಿಂಡಿ, ಖ್ಯಾತ ಗಾಯಕ ವಿಜಯಪ್ರಕಾಶ್ ಮತ್ತು ತಂಡದಿಂದ ಸಂಗೀತ, ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಫೆ.3 ರಂದು ಸಂಜೆ 7.30ಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸುವರು.
ಅಯೋಧ್ಯೆಯಲ್ಲಿ ಇತ್ತೀಚೆಗೆ ರಾಮಾಯಣ ಬಯಲಾಟ ಪ್ರದರ್ಶಿಸಿದ ಕೆ.ಸತ್ಯನಾರಾಯಣ ತಂಡದಿಂದ ಸಂಪೂರ್ಣ ರಾಮಾಯಣ ಬಯಲಾಟ ಪ್ರದರ್ಶನ, ಕೊಲ್ಕತ್ತದ ಗೋಲ್ಡನ್ ಗರ್ಲ್ಸ್ನಿಂದ ಗಣಪತಿ, ಶಿವ ಹಾಗೂ ಭಕ್ತಿ ನೃತ್ಯರೂಪಕ, ಖ್ಯಾತ ವಾಯಿಲಿನ್ ವಾದಕ ಜೋಷಿ ಶ್ರೀಕಾಂತ ಮತ್ತು ತಂಡದಿಂದ ತಂತಿ ವಾದ್ಯಗಳ ಗೋಷ್ಠಿ, ಖ್ಯಾತ ಸಂಗೀತ ಸಂಯೋಜಕ ವಿ.ಹರಿಕೃಷ್ಣ ಮತ್ತು ತಂಡದಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಿದೆ.

ಫೆ.4ರಂದು ಸಂಜೆ 7 ಗಂಟೆಗೆ ಸಮಾರೋಪಗೊಳ್ಳಲಿದ್ದು, ಕ್ರೇಜಿ ಸ್ಟಾರ್ ರವಿಚಂದ್ರನ್, ಖ್ಯಾತ ನಟರಾದ ರವಿಶಂಕರ್ ಆರ್ಮುಗಂ, ಅಜಯ್‌ರಾವ್, ನೆನಪಿರಲಿ ಪ್ರೇಮ್, ನಟಿಯರಾದ ರಾಗಿಣಿ ದ್ವಿವೇದಿ, ನಮೃತ ಗೌಡ, ನಮಿಕಾ ರತ್ನಾಕರ, ನಿಸ್ವಿಕಾ ನಾಯ್ಡು, ಸಂಯುಕ್ತಾ ಹೆಗಡೆ, ದಿಗಂತ್ ಅವರು ನೃತ್ಯ ಪ್ರದರ್ಶಿಸಲಿದ್ದು, ಸಂಗೀತ ಸಂಯೋಜಕ ಸಾಧು ಕೋಕಿಲಾ ಮತ್ತು ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ಹಂಪಿ ಉತ್ಸವದಲ್ಲಿ ಒಟ್ಟು ನಾಲ್ಕು ವೇದಿಕೆಗಳನ್ನು ಏರ್ಪಡಿಸಿದ್ದು, ಸ್ಥಳಿಯ ಮತ್ತು ರಾಜ್ಯ ಮಟ್ಟದ ಕಲಾವಿದರಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ವಿಜಯನಗರ ಸಾಮ್ರಾಜ್ಯದ ಗತ ಕಾಲದ ಸಾಂಸ್ಕೃತಿಕ ವೈಭವ ಮರುಕಳಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!