1.25 ಕೋಟಿ ರೂ.ವೆಚ್ಚದ ‘ಶ್ರೀ ಶಾರದಾದೇವಿ’ ಸಂಚಾರಿ ಕಣ್ಣಿನ ಆಸ್ಪತ್ರೆ ಬೆಂಗಳೂರಿನಲ್ಲಿ ಲೋಕಾರ್ಪಣೆ

ಹೊಸ ದಿಗಂತ ವರದಿ, ತುಮಕೂರು:

ರಾಷ್ಟ್ರದಲ್ಲಿ ನೇತ್ರ ತಜ್ಞರ ಕೊರತೆಯಿದೆ. 1 ಲಕ್ಷ ಜನರ ಸೇವೆಗೆ ಕೇವಲ ಒಬ್ಬ ನೇತ್ರ ತಜ್ಞರ ಲಭ್ಯತೆಯಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥ ಜಪಾನಂದ ಸ್ವಾಮೀಜಿ ಹೇಳಿದರು.
ಇನ್ಫೋಸಿಸ್ ಸಹಯೋಗದಲ್ಲಿ ಬೆಂಗಳೂರಿನಲ್ಲಿ ರಾಮಕೃಷ್ಣ ಸೇವಾಶ್ರಮದ ವತಿಯಿಂದ ಶ್ರೀ ಶಾರದಾದೇವಿ ಸಂಚಾರಿ ಕಣ್ಣಿನ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕರೋನಾ ಅವಧಿಯ ಶಿಕ್ಷಣ ಕ್ರಮದಿಂದ ಲಕ್ಷಾಂತರ ಮಂದಿ ಮಕ್ಕಳು ಕಣ್ಣಿನ ಬಾಧೆಗೆ ಒಳಗಾಗಿದ್ದಾರೆ. 2000 ಮಕ್ಕಳಲ್ಲಿ ಒಬ್ಬರಿಗೆ ದೃಷ್ಟಿ ದೋಷವಿದೆ ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಈ ಪೈಕಿ ಸಾವಿರಾರು ಮಕ್ಕಳು ಚಿಕಿತ್ಸೆ ಪಡೆಯುವ ಆರ್ಥಿಕ ಚೈತನ್ಯ ಹೊಂದಿಲ್ಲ. ಈ ನಿಟ್ಟಿನಲ್ಲಿ ಪ್ರತಿ ಶಾಲಾ ಮಕ್ಕಳಿಗೆ ಪ್ರಮುಖವಾಗಿ ಗ್ರಾಮೀಣ ಭಾಗದ ಮಕ್ಕಳ ನೇತ್ರ ರಕ್ಷಣೆಯ ಹಿತಾಸಕ್ತಿಯೊಂದಿಗೆ ಇನ್ಫೋಸಿಸ್ ಸಹಯೋಗದಲ್ಲಿ ಸುಮಾರು 1.25 ಕೋಟಿ ರೂ.ವೆಚ್ಚದ ಅತ್ಯಂತ ಗುಣಮಟ್ಟದ ಸಂಚಾರಿ ಕಣ್ಣಿನ ಆಸ್ಪತ್ರೆಗೆ ಚಾಲನೆ ನೀಡಲಾಗಿದೆ. ಈ ಮೂಲಕ ಎಲ್ಲಾ ಶಾಲಾ ಮಕ್ಕಳನ್ನು ಶಾಲೆಯಲ್ಲೇ ತಪಾಸಣೆಗೆ ಒಳಪಡಿಸಿ, ನೇತ್ರ ಸಮಸ್ಯೆ ಉಳ್ಳವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದರು.
ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮಾತನಾಡಿ, ದುರಾಸೆಗೆ ಮದ್ದಿಲ್ಲ. ಹಣ, ಅಧಿಕಾರದ ಆಮಿಷಕ್ಕೆ ಒಳಗಾಗಿರುವ ಇಂದಿನ ಸಮಾಜ, ಭ್ರಷ್ಟಾಚಾರಿಗಳನ್ನು ಹೊತ್ತು ಮೆರೆಸುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದರು. ಸಮಾಜವನ್ನು ಕೊಳ್ಳೆ ಹೊಡೆಯುತ್ತಿರುವವರನ್ನು ಬಹಿಷ್ಕರಿಸುವ ಸಂಪ್ರದಾಯ ಮತ್ತೆ ಮರುಕಳಿಸಬೇಕು. ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಜಾಗೃತಗೊಳಿಸುವ ವಾತಾವರಣವನ್ನು ಪೋಷಕರು ರೂಪಿಸಬೇಕು ಎಂದು ಸಲಹೆ ನೀಡಿದರು. ತೃಪ್ತಿ ಹಾಗೂ ಮಾನವೀಯ ಮೌಲ್ಯಗಳು ಮನಸ್ಸಿನಲ್ಲಿ ಮೂಡಿದಾಗ ಮಾತ್ರ ಸಮಾಜ ಹಾಗೂ ಆತ್ಮೋದ್ಧಾರ ಸಾಧ್ಯವಾಗಲಿದೆ ಎಂದು ತಿಳಿಸಿದರು. ಮಹತ್ವಾಕಾಂಕ್ಷೆ ಹೊಂದುವುದು ಅಪರಾಧವಲ್ಲ. ಇನ್ನೊಬ್ಬರ ಜೇಬು ಕತ್ತರಿಸಿ, ಮತ್ತೊಬ್ಬರ ಜೀವನವನ್ನು ದುಸ್ತರಗೊಳಿಸಿ ಹಣ ಸಂಪಾದಿಸುವುದು ಸಮಾಜಘಾತುಕತನ ಎಂದು ಹೇಳಿದರು.

ನ್ಯಾಯಮೂರ್ತಿ ವೆಂಕಟಾಚಲಯ್ಯ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳ ಏಳ್ಗೆಗಾಗಿ ಶ್ರಮಿಸುತ್ತಿರುವ ಶ್ರೀ ರಾಮಕೃಷ್ಣ ಸೇವಾಶ್ರಮದ ಕಾರ್ಯ ಸ್ತುತ್ಯರ್ಹ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಇನ್ಫೋಸಿಸ್ ಸಂಸ್ಥೆಯ ಪ್ರತಿನಿಧಿ ಸುನೀಲ್ ಕುಮಾರ್ ಧಾರೇಶ್ವರ್ ಮಾತನಾಡಿ, ಸಮಾಜದಿಂದ ಗಳಿಸಿದ ಲಾಭವನ್ನು ಸಾಮಾಜಿಕ ಕೆಲಸಗಳಿಗೆ ನೀಡಲು ಸಂಸ್ಥೆ ಎಂದಿಗೂ ಬದ್ಧವಾಗಿದೆ ಎಂದು ತಿಳಿಸಿದರು.
ನಾಡೋಜ ವುಡೇ ಪಿ ಕೃಷ್ಣ, ನ್ಯಾಯಮೂರ್ತಿ ರತ್ನಕಲಾ, ವೈದ್ಯರಾದ ಭುಜಂಗ ಶೆಟ್ಟಿ, ಮಯ್ಯ, ವಿಶ್ವನಾಥ್, ಸೂರ್ಯಕಾಂತ್ ಶೆಟ್ಟಿ, ಪತ್ರಕರ್ತರಾದ ನಾಗಣ್ಣ, ಆರ್ ಪಿ ಎಸ್ ರೆಡ್ಡಿ ಹಾಗೂ ಸುಬ್ಬರಾಮಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!