ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಟ್ರಾಫಿಕ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಆದರೆ ನಿನ್ನೆ ಸಂಜೆ ಉಂಟಾದ ಟ್ರಾಫಿಕ್ ಜಾಮ್ ಸಾಮಾಜಿಕ ಜಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಒಂದು ಕಿಮೀ ಸಾಗಲು ಎರಡು ಗಂಟೆ ಅವಧಿ ತೆಗೆದುಕೊಂಡಿರುವುದಾಗಿ ಬೆಂಗಳೂರು ಮಂದಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ಇಂದು ಈದ್ ಮಿಲಾದ್, ನಾಳೆ ಕರ್ನಾಟಕ ಬಂದ್, ಶನಿವಾರ-ಭಾನುವಾರ ರಜೆ, ಅಕ್ಟೋಬರ್ 2ರಂದು ಗಾಂಧಿ ಜಯಂತಿ ಸಾಲು ಸಾಲು ರಜೆ ಹಿನ್ನೆಲೆ ಬೆಂಗಳೂರಿನಿಂದ ಹೊರಹೋಗುವವರ ಸಂಖ್ಯೆ ಹೆಚ್ಚಾಗೇ ಇತ್ತು. ಇದರಿಂದಾಗಿ ನಗರದ ಹೊರ ವರ್ತುಲ ರಸ್ತೆ (ORR) ಪ್ರದೇಶವು ಭಾರೀ ದಟ್ಟಣೆಯಿಂದ ಹದಗೆಟ್ಟಿದ್ದು, ವಾಹನ ಸವಾರರು ಅಕ್ಷರಶಃ ನಲುಗಿ ಹೋಗಿದ್ದರು. ಮಳೆ, ಗಣೇಶ ವಿಸರ್ಜನೆಯಿಂದಲೂ ಸಂಚಾರ ದಟ್ಟಣೆ ಉಂಟಾಗಿತ್ತು.
ರಸ್ತೆಗಳಿಗೆ ಬರದಂತೆ ಟ್ರಾಫಿಕ್ ಪೊಲೀಸರ ಸಲಹೆ
ಅತಿಯಾದ ಟ್ರಾಫಿಕ್‌ನಿಂದಾಗಿ ರಾತ್ರಿ 9 ಗಂಟೆಯೊಳಗೆ ಕಚೇರಿಯಿಂದ ಹೊರಗೆ ಬರದಂತೆ ಸಂಚಾರ ಪೊಲೀಸರು ಸೂಚಿಸಿದ್ದರು. ಸಂಚಾರ ದಟ್ಟಣೆ ಹೆಚ್ಚಿರುವ ಕಾರಣ ಒಆರ್‌ಆರ್, ಮಾರತ್ತಹಳ್ಳಿ, ಸರ್ಜಾಪುರ, ಸಿಲ್ಕ್‌ಬೋರ್ಡ್ ಮಾರ್ಗಗಳಲ್ಲಿ ಸಂಚರಿಸದಂತೆ ಪೊಲೀಸರು ಸೂಚಿಸಿದರು.
ಒಂದೂವರೆ ಕಿಲೋಮೀಟರ್ ಕ್ರಮಿಸಲು 3 ಗಂಟೆ
ಭಾರೀ ಟ್ರಾಫಿಕ್‌ನಿಂದಾಗಿ ಸಂಜೆ ನಾಲ್ಕು ಗಂಟೆಗೆ ಮಕ್ಕಳನ್ನು ಹತ್ತಿಸಿಕೊಂಡ ಬಸ್ ರಾತ್ರಿ 8 ಗಂಟೆಗೆ ತಮ್ಮ ತಮ್ಮ ಮನೆಗೆ ಇಳಿಸಿದೆ ಎಂದು ಪೋಷಕರೊಬ್ಬರು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ರಾತ್ರಿಯಾದರೂ ಮನೆಗೆ ಬಾರದ ಮಕ್ಕಳಿಗಾಗಿ ಅತಂಕಗೊಂಡ ಪೋಷಕರು ಶಾಲಾ ಆಡಳಿತ ಮಂಡಳಿಗೆ ಮೆಸೇಜ್ ಮಾಡಿರುವ ಸ್ಕ್ರೀನ್ ಶಾಟ್‌ಗಳನ್ನು ಕಾಣಬಹುದು.
ಇನ್ನು ಬೆಳ್ಳಂದೂರಿನಲ್ಲಿ ಸಂಚಾರ ದಟ್ಟಣೆಯಿಂದ ಪಾದಚಾರಿಗಳಿಗೆ ಸ್ಥಳವಿಲ್ಲದೆ ಫುಟ್ ಪಾತ್ ನ ಎರಡೂ ಬದಿಯಲ್ಲಿ ದ್ವಿಚಕ್ರ ವಾಹನಗಳು ಸಂಚರಿಸಿದವು.