ಹೊಸದಿಗಂತ ವರದಿ, ಮೈಸೂರು:
ಶಿವಮೊಗ್ಗದಲ್ಲಿ ದುರಳರಿಂದ ಹತ್ಯೆಗೀಡಾದ ಹರ್ಷ ಹಿಂದೂ ಕುಟುಂಬಕ್ಕೆ ವೈಯಕ್ತಿಕವಾಗಿ ಒಂದು ಲಕ್ಷ ರೂ ಪರಿಹಾರ ನೀಡುವುದಾಗಿ ಮೈಸೂರಿನ ಚಾಮರಾಜ ಕ್ಷೇತ್ರದ ಬಿಜೆಪಿ ಶಾಸಕ ಎಲ್.ನಾಗೇಂದ್ರ ಘೋಷಿಸಿದರು.
ಬುಧವಾರ ನಗರದ ಚಿಕ್ಕಗಡಿಯಾರದಲ್ಲಿ ಹರ್ಷ ಹತ್ಯೆ ಖಂಡಿಸಿ ಹಿಂದುಪರ ಸಂಘಟನೆಗಳು ನಡೆಸಿದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದು ಸಂಘಟನೆಯ ಕಾರ್ಯಕರ್ತರಾದ ಮೈಸೂರಿನ ಕ್ಯಾತಮಾರನಹಳ್ಳಿಯ ರಾಜು, ಬೆಂಗಳೂರಿನ ರುದ್ರೇಶ್, ಕೊಡಗಿನ ಕುಟ್ಟಪ್ಪ, ಶಿವು ಸೇರಿದಂತೆ ಇಲ್ಲಿಯ ತನಕ ದುಷ್ಕರ್ಮಿಗಳು 24 ಮಂದಿಯನ್ನು ಹತ್ಯೆ ಮಾಡಿದ್ದಾರೆ. ಕೇರಳದಲ್ಲಿ ಆರ್‌ಎಸ್‌ಎಸ್ ಕಚೇರಿಯನ್ನು ಧ್ವಂಸ ಮಾಡಿದ್ದಾರೆ. ಈ ಎಲ್ಲಾ ಕೃತ್ಯಗಳ ಹಿಂದೆ ಎಸ್‌ಡಿಪಿಐ, ಪಿಎಫ್‌ಐ, ಸೆಮಿ ಮುಂತಾದ ಸಂಘಟನೆಗಳ ಕೈವಾಡವಿರುವುದು ಕಂಡು ಬಂದಿದೆ. ಇದಕ್ಕೆ ಸಾಕಷ್ಟು ಪುರಾವೆಗಳಿದ್ದರೂ, ಈ ಸಂಘಟನೆಗಳನ್ನು ಇನ್ನೂ ಯಾಕೇ ಸರ್ಕಾರಗಳು ನಿಷೇಧ ಮಾಡಿಲ್ಲ, ನಿಮ್ಮದೇ ಸರ್ಕಾರ ಅಧಿಕಾರದಲ್ಲಿದ್ದರೂ, ಯಾಕೇ ನಿಷೇಧ ಮಾಡುತ್ತಿಲ್ಲ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ದುಷ್ಕೃತ್ಯ ಎಸಗುತ್ತಿರುವ ಈ ಸಂಘಟನೆಗಳನ್ನು ನಿಷೇಧಿಸುವ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಚರ್ಚಿಸಲು ಕಾಂಗ್ರೆಸ್‌ನವರು ಅವಕಾಶವನ್ನೇ ನೀಡಲಿಲ್ಲ, ದಿನಕ್ಕೆ ಜನರ ತೆರಿಗೆ ಹಣ 2ವರೆ ಕೋಟಿ ರೂಗಳನ್ನು ಅಧಿವೇಶನಕ್ಕೆಂದು ಖರ್ಚು ಮಾಡುತ್ತಿದ್ದರೂ, ಕಾಂಗ್ರೆಸ್‌ನವರು ಧರಣಿ ನಡೆಸುವ ಮೂಲಕ ಕಲಾಪವನ್ನು ಹಾಳು ಮಾಡಿದರು. ಈಗ ಜನರ ಮುಂದೆ ಘಟನೆಯ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಹರ್ಷ ಕೊಲೆ ಪ್ರಕರಣದ ವಿಚಾರವಾಗಿ ಸರ್ಕಾರ ಸುಮ್ಮನೆ ಕೈಕಟ್ಟಿ ಕುಳಿತಿಲ್ಲ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳ ವಿರುದ್ಧ ಭಯೋತ್ಪಾಧನೆಯ ಕೇಸ್ ದಾಖಲಿಸುತ್ತಿದೆ. ಕೊಲೆಗಡುಕರನ್ನು ಬಿಜೆಪಿ ಸರ್ಕಾರ ಸುಲಭವಾಗಿ ಬಿಡುವುದಿಲ್ಲ. ಅವರನ್ನು ಗಲ್ಲಿಗೇರಿಸುತ್ತೇವೆ ಎಂದು ಗುಡುಗಿದರು.