ಭ್ರೂಣ ಲಿಂಗಪತ್ತೆ ಮಾಡುವವರ ಕುರಿತು ಮಾಹಿತಿ ನೀಡಿದರೆ 1 ಲಕ್ಷ ರೂ. ಬಹುಮಾನ: ಆರೋಗ್ಯ ಇಲಾಖೆ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದಲ್ಲಿ ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ (ಭ್ರೂಣ ಲಿಂಗಪತ್ತೆ) ಮಾಡುವ ಆಸ್ಪತ್ರೆಗಳು, ಸ್ಕ್ಯಾನಿಂಗ್ ಸೆಂಟರ್ ಸಹಿತ ಭ್ರೂಣ ಲಿಂಗಪತ್ತೆ ಮಾಡುವ ಬಗ್ಗೆ ಗುಪ್ತ ಕಾರ್ಯಾಚರಣೆ ಮೂಲಕ ಮಾಹಿತಿ ನೀಡುವವರಿಗೆ ಆರೋಗ್ಯ ಇಲಾಖೆಯಿಂದ 1 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದೆ.

ರಾಜ್ಯದಲ್ಲಿ ಗರ್ಭಪೂರ್ವ ಮತ್ತು ಪ್ರಸವ ಪೂರ್ವವಾಗಿ ಭ್ರೂಣಲಿಂಗ ಪತ್ತೆ ಮಾಡುವ ಗುಪ್ತ ಕಾರ್ಯಾಚರಣೆ ಅಥವಾ ಮಾಹಿತಿ ನೀಡುವವರಿಗೆ 50 ಸಾವಿರ ರೂ. ಬಹುಮಾನ ನೀಡಲಾಗುತ್ತಿತ್ತು. ಆದರೆ, ಈ ಬಹುಮಾನದ ಮೊತ್ತವನ್ನು ಸದರಿ 2024-25ನೇ ಆರ್ಥಿಕ ಸಾಲಿನಿಂದ 1,00,000 ರೂ.ಗೆ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದೆ. ಅದರಂತೆ ಭ್ರೂಣಲಿಂಗ ಪತ್ತೆ ಯಶ್ವಸಿಗೊಂಡ ಗುಪ್ತ ಕಾರ್ಯಾಚಾರಣೆ ಮಾಹಿತಿ ನೀಡುವವರಿಗೆ ನೀಡುವ ಬಹುಮಾನ ರೂ. 50,000 ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದಲೂ ಹಾಗೂ ಇನ್ನುಳಿದ ರೂ. 50,000 ಮೊತ್ತವನ್ನು ಆಯಾ ಜಿಲ್ಲೆಗಳಲ್ಲಿ ಸಂಗ್ರಹವಾಗಿರುವ ಪಿ.ಸಿ & ಪಿ.ಎನ್.ಡಿ.ಟಿ. ಶುಲ್ಕದಿಂದ ನೀಡಲು ಆದೇಶಿಸಿದೆ.

ಸರ್ಕಾರಿ ಆದೇಶ…
ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರವಿಧಾನಗಳು (ಲಿಂಗ ಆಯ್ಕೆ ನಿಷೇಧ) ಕಾಯ್ದೆ 1994 ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಯಶ್ವಸಿಗೊಂಡ ಗುಪ್ತಕಾರ್ಯಾಚರಣೆಗೆ ಮಾಹಿತಿ ನೀಡುವ ಮಾಹಿತಿದಾರರಿಗೆ ಈಗಾಗಲೇ 2024-25 ನೇ ಸಾಲಿನ ಆರ್.ಓ.ಪಿ. Sl.No. 19.13 ರಲ್ಲಿ ಅನುಮೋದನೆಯಾಗಿರುವಂತೆ ರೂ. 50,000/- (ರೂ. ಐವತ್ತು ಸಾವಿರಗಳು) ಬಹುಮಾನವಾಗಿ ನೀಡಲಾಗುತ್ತಿದೆ.

ಆದರೆ, 2023ರ ಡಿಸೆಂಬರ್‌ನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮೇಲ್ವಿಚಾರಣಾ ಮಂಡಳಿಯ ಸಭೆಯಲ್ಲಿ ಪಿ.ಸಿ & ಪಿ.ಎನ್.ಡಿ.ಟಿ. ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನೀಡುವ ರೂ. 50,000 ಮೊತ್ತವನ್ನು 1,00,000 ರೂ.ಗಳಿಗೆ ಏರಿಕೆ ಮಾಡಲು ನಿರ್ಧಾರಿಸಲಾಯಿತು. ಅದರಂತೆ, ಯಶ್ವಸಿಗೊಂಡ ಗುಪ್ತ ಕಾರ್ಯಾಚಾರಣೆ ಮಾಹಿತಿ ನೀಡುವವರಿಗೆ ನೀಡುವ ಬಹುಮಾನ ರೂ. 50,000 ವನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಿಂದಲೂ, ಇನ್ನುಳಿದ ರೂ. 50,000 ಮೊತ್ತವನ್ನು ಆಯಾ ಜಿಲ್ಲೆಗಳಲ್ಲಿ ಸಂಗ್ರಹವಾಗಿರುವ ಪಿ.ಸಿ & ಪಿ.ಎನ್.ಡಿ.ಟಿ. ಶುಲ್ಕದಿಂದ ನೀಡಲು ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!