ಮಹಾಕುಂಭಮೇಳ ಕಾಲ್ತುಳಿತದಲ್ಲಿ ಬಿಹಾರದ 10 ಭಕ್ತರು ಸಾವು: ಹಲವರು ಇನ್ನೂ ನಾಪತ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾಕುಂಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಭಕ್ತರು ಪ್ರಾಣ ಕಳೆದುಕೊಂಡರೆ, 60 ಮಂದಿ ಗಾಯಗೊಂಡಿದ್ದಾರೆ.

ಮೃತಪಟ್ಟವರಲ್ಲಿ ಬಿಹಾರದ 10 ಮಹಿಳೆಯರೂ ಸೇರಿದ್ದಾರೆ. ಅಲ್ಲದೇ, ಇನ್ನೂ ಹಲವರು ನಾಪತ್ತೆಯಾಗಿದ್ದು, ಅವರ ಕುಟುಂಬದ ಸದಸ್ಯರಿಗೆ ಈ ಬಗ್ಗೆ ಯಾವುದೇ ಮಾಹಿತಿ ಸಿಗದೇ ಆತಂಕಕ್ಕೆ ಒಳಗಾಗಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ಬುಧವಾರ ಆಯೋಜಿಸಿದ್ದ ಮಹಾಕುಂಭದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಗೋಪಾಲಗಂಜ್‌ನ 4 ಮಹಿಳೆಯರು ಸಾವನ್ನಪ್ಪಿದ್ದಾರೆ. ಇವರಲ್ಲಿ ಬರೌಲಿ ಪೊಲೀಸ್ ಠಾಣಾ ವ್ಯಾಪ್ತಿಯ ಮದನ್‌ಪುರ ಗ್ರಾಮದ ನಿವಾಸಿ ಶಿವಕಾಳಿ ದೇವಿ (65), ಭೋರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಮನಗರ ಗ್ರಾಮದ ಸರಸ್ವತಿ ದೇವಿ(68), ಉಚ್ಕಾ ಪೊಲೀಸ್ ಠಾಣೆ ವ್ಯಾಪ್ತಿಯ ಶ್ಯಾಂಪುರ್ ಗ್ರಾಮದ ತಾರಾ ದೇವಿ (62) ಮತ್ತು ಬಾಳೇಸರ ಗ್ರಾಮದ ಹಳೆ ಸುಶೀಲಾದೇವಿ ಮೃತರು ಎಂಬುದು ತಿಳಿದುಬಂದಿದೆ.

ಇದಲ್ಲದೇ ಬಾಳೇಸರ ಗ್ರಾಮದ ನಿವಾಸಿ ಕಾಂತಿದೇವಿ (65 ವರ್ಷ) ಎಂಬುವವರೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಇದೇ ವೇಳೆ ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಜಗದೀಶ್‌ಪುರ ಗ್ರಾಮದ ನಿವಾಸಿಗಳಾದ ಮುನ್ನಿದೇವಿ, ರಾಜಕುಮಾರಿ ದೇವಿ, ಶೋಭಾವತಿ ದೇವಿ ಹಾಗೂ ರೀಮಾದೇವಿ ನಾಪತ್ತೆಯಾಗಿದ್ದು, ಅವರ ಕುಟುಂಬಕ್ಕೆ ನಾಪತ್ತೆಯಾದವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.

ಬಿಹಾರದ ಔರಂಗಾಬಾದ್‌ನ ಇಬ್ಬರು ಮಹಿಳಾ ಭಕ್ತರು ಕೂಡ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಮೃತ ರಾಜರಾಣಿ ದೇವಿ (65 ವರ್ಷ), ಗೋಹ್ ಬ್ಲಾಕ್‌ನ ಬಂಡೆಯಾ ಪೊಲೀಸ್ ಠಾಣೆ ವ್ಯಾಪ್ತಿಯ ಸೊಸುನಾ ಗ್ರಾಮದ ನಿವಾಸಿ ಎಂಬುದು ತಿಳಿದುಬಂದಿದೆ. ಸುರೇಶ್ ಯಾದವ್ ಅವರ ಪತ್ನಿ ರಾಜರಾಣಿ ಜನವರಿ 27 ರಂದು ತಮ್ಮ ಮಗ ಗುಡ್ಡು ಜೊತೆ ಪ್ರಯಾಗ್‌ರಾಜ್‌ಗೆ ಹೋಗಿದ್ದರು. ಅವರ ಜೊತೆಗೆ ಗ್ರಾಮದ ಇತರ ಜನರು ಕೂಡ ಮಹಾಕುಂಭ ಸ್ನಾನಕ್ಕೆ ತೆರಳಿದ್ದರು. ಇದೇ ರೀತಿ ಹಾಸ್ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಾನ್ಪುರ ಗ್ರಾಮದ ನಿವಾಸಿ ಸೋನಮ್ ಕುಮಾರಿ (20) ಕೂಡ ಮಹಾಕುಂಭದಲ್ಲಿ ಮರಣ ಹೊಂದಿದ್ದಾರೆ.

ಕಾಲ್ತುಳಿತದಲ್ಲಿ ಸುಪೌಲ್‌ನ ಮಹಿಳೆಯೊಬ್ಬರು ಸಹ ತನ್ನ ಪ್ರಾಣ ಕಳೆದುಕೊಂಡಿದ್ದಾರೆ. ಮೃತರು ದೇಹಪುರದ ರಾಮ್‌ವಿಶನ್‌ಪುರ ಗ್ರಾಮದ ನಿವಾಸಿ. ಆಕೆಯ ಪತಿ ಬಿಹಾರಿ ಯಾದವ್ ಎರಡು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮಹಿಳೆಯ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತದೇಹವನ್ನು ಗುರುವಾರ ಸುಪೌಲ್‌ಗೆ ತರಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದೇ ರೀತಿ ಮಧುಬನಿಯಿಂದ ಬಂದಿದ್ದ ಸೀತಾದೇವಿ (55 ವರ್ಷ) ಎಂಬುವವರೂ ಮೃತಪಟ್ಟಿದ್ದಾರೆ.

ಬಿಹಾರದ ಮುಜಾಫರ್‌ಪುರದ ಮಹಿಳೆಯೊಬ್ಬರು ಸಹ ಮಹಾಕುಂಭದ ಸಂದರ್ಭದಲ್ಲಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದಾರೆ. ಮೃತ ಶಿವಾ ದೇವಿ (60 ವರ್ಷ) ಜಿಲ್ಲೆಯ ಮಶಾರಿ ಬ್ಲಾಕ್‌ನ ಛಪ್ರಾ ಮೇಘ ಪಂಚಾಯತ್‌ನ ರೂಪನಾಥ ಟೋಲಾ ನಿವಾಸಿ. ಆಕೆಯ ಪತಿ ಬಲದೇವ್ ಶರ್ಮಾ ಈಗಾಗಲೇ ತೀರಿಕೊಂಡಿದ್ದಾರೆ. ಇದೇ ರೀತಿ ಬಗಾಹ ನಿವಾಸಿ ಮಹಿಳೆಯೂ ಸಾವನ್ನಪ್ಪಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ಕುಂಭಸ್ನಾನ ಮಾಡಲು ತೆರಳಿದ್ದ ಸದರ್ ಬ್ಲಾಕ್‌ನ ಅಮನ್ ಗ್ರಾಮದ ನಿವಾಸಿಗಳಾದ ರೇಣುದೇವಿ ಮತ್ತು ಸಿಯಾಮಣಿ ದೇವಿ ಕಾಲ್ತುಳಿತದ ನಂತರ ಪತ್ತೆಯಾಗಿಲ್ಲ. ಇದರಿಂದಾಗಿ ಸದ್ಯ ಕುಟುಂಬದ ಸದಸ್ಯರು ಆತಂಕಕ್ಕೊಳಗಾಗಿದ್ದಾರೆ.

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!