ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ಹಠಾತ್ ಪ್ರವಾಹ ದುರಂತವನ್ನು ಸೃಷ್ಟಿಸಿದೆ. ರಾಜ್ಯದಲ್ಲಿ ಪ್ರವಾಹದಿಂದಾಗಿ ಇದುವರೆಗೆ 10 ಮಂದಿ ಸಾವನ್ನಪ್ಪಿದ್ದು, 82 ಮಂದಿ ನಾಪತ್ತೆಯಾಗಿದ್ದಾರೆ. ಒಟ್ಟು 14 ಸೇತುವೆಗಳು ಹಾನಿಗೊಳಗಾಗಿದ್ದು, 3000 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರವಾಹದಿಂದಾಗಿ 23 ಸೇನಾ ಸಿಬ್ಬಂದಿ ಕೊಚ್ಚಿ ಹೋಗಿದ್ದಾರೆ. ಇಲ್ಲಿಯವರೆಗೆ ಓರ್ವ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಉತ್ತರ ಸಿಕ್ಕಿಂನ ಲೋನಕ್ ಸರೋವರದಲ್ಲಿ ‘ಮೇಘ ಸ್ಫೋಟ’ವು ವಿನಾಶಕಾರಿ ಮಳೆಗೆ ಕಾರಣವಾಯಿತು. ಇದರಿಂದಾಗಿ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿದೆ. ರಾಜ್ಯದ ಅತಿದೊಡ್ಡ ಜಲವಿದ್ಯುತ್ ಸ್ಥಾವರವಾದ ಚುಂಗ್‌ಥಾಂಗ್‌ನಲ್ಲಿನ ಅಣೆಕಟ್ಟು ಪ್ರವಾಹದಿಂದ ಕೊಚ್ಚಿಹೋಗಿದೆ. ಸಿಕ್ಕಿಂ ಸರ್ಕಾರವು ಪ್ರವಾಹವನ್ನು ʻವಿಪತ್ತುʼ ಎಂದು ಘೋಷಿಸಿದೆ.
ಮಂಗನ್ ಜಿಲ್ಲೆಯ ಚುಂಗ್ಟಾಂಗ್, ಗ್ಯಾಂಗ್ಟಾಕ್ ಜಿಲ್ಲೆಯ ದಿಕ್ಚು, ಸಿಂಗ್ಟಮ್ ಮತ್ತು ಪಾಕ್ಯೊಂಗ್ ಜಿಲ್ಲೆಯ ರಂಗ್ಪೋ ಪ್ರದೇಶಗಳಲ್ಲಿ ಹೆಚ್ಚಿನ ಪರಿಣಾಮ ಬೀರಿದೆ. ಈ ಜಿಲ್ಲೆಗಳಲ್ಲಿ ಮೊಬೈಲ್ ನೆಟ್‌ವರ್ಕ್ ಮತ್ತು ವಿದ್ಯುತ್ ಸಂಪರ್ಕಗಳು ಸಂಪೂರ್ಣವಾಗಿ ನಾಶವಾಗಿವೆ. ನಾಪತ್ತೆಯಾಗಿರುವ 23 ಯೋಧರಿಗಾಗಿ ತ್ರಿಶಕ್ತಿ ಕಾರ್ಪ್ಸ್ ಪಡೆಗಳು ಪ್ರಸ್ತುತ ಶೋಧ ನಡೆಸುತ್ತಿವೆ. ತೀಸ್ತಾ ನದಿ ಜಲಾನಯನ ಪ್ರದೇಶದಲ್ಲಿ ಹೂಳೆತ್ತುವ ಕಾರ್ಯ ನಡೆಯುತ್ತಿದೆ.