ಮತ ಚಲಾಯಿಸಿ ಬಂದವರಿಗೆ ಈ ಹೋಟೆಲ್‌ನಲ್ಲಿ 10% ಡಿಸ್ಕೌಂಟ್!

– ರಾಜಶೇಖರ ಡೋಣಜಮಠ

ರಾಜ್ಯ ವಿಧಾನಸಭಾ ಚುನಾವಣೆ ಮತದಾನಕ್ಕೆ ಇನ್ನು 2 ದಿನ ಮಾತ್ರ ಬಾಕಿ ಇದೆ. ಚುನಾವಣಾ ಆಯೋಗ ಹಾಗೂ ವಿವಿಧ ಸಂಘ ಸಂಸ್ಥೆಗಳು ರಾಜ್ಯದಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ವಿವಿಧ ರೀತಿಗಳಲ್ಲಿ ಜಾಗೃತಿ ಮೂಡಿಸುತ್ತಿವೆ. ಮತದಾನಕ್ಕೆ ಉತ್ತೇಜನ ನೀಡಲು ಸ್ಥಳೀಯ ಹೊಟೇಲ್‌ ಒಂದು ಮತದಾನ ಮಾಡಿದ ಮತದಾರರಿಗೆ ತನ್ನ ಹೊಟೇಲ್ನ ತಿಂಡಿ-ತಿನಿಸುಗಳ ಬಿಲ್ನಲ್ಲಿ 10% ರಿಯಾಯತಿ ಘೋಷಿಸಿರುವ ಭಿತ್ತಿ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ.

ಮೇ.10ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರಿಗೆ ವಿಜಯಪುರ ಜಿಲ್ಲೆಯ ಚಡಚಣದ ಉಡುಪಿ ಶಾಂತಿ ಸಾಗರ ಹೊಟೇಲ್ ಈ ರಿಯಾಯತಿ ಘೋಷಿಸಿದ್ದು, ಮತ ಚಲಾಯಿಸಿ ಬಂದವರಿಗೆ ಬಾಯಲ್ಲಿ ನೀರೂರಿಸುವ ವಿವಿಧ ಬಗೆಯ ದೋಸೆ, ಪಲಾವ, ಇಡ್ಲಿ, ಪುರಿ ಸೇರಿದಂತೆ ಚೈನೀಸ್ ತಿಂಡಿಗಳನ್ನು ರಿಯಾಯತಿಯಲ್ಲಿ ಕೊಡಲು ನಿರ್ಧರಿಸಿದೆ.

ಈ ಕುರಿತು ಹೊಟೇಲ್ ಮಾಲೀಕ ಹರೀಶ ಶೆಟ್ಟಿ ಮಾತನಾಡಿ, ದಿನಸಿ, ತರಕಾರಿ, ಗ್ಯಾಸ ಸಿಲಿಂಡರ್ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿಯೂ ಕೂಡ ನಾವು ಮತದಾನದ ಉತ್ತೇಜನಕ್ಕಾಗಿ ಚುನಾವಣಾ ಆಯೋಗದೊಂದಿಗೆ ಕೈಜೋಡಿಸಲು ಸಜ್ಜಾಗಿದ್ದೇವೆ. ಮತದಾರರು ಅಂದು ಮತ ಚಲಾಯಿಸಿರುವ ಗುರುತು, ಕೈ ಬೆರಳಿನ ಮೇಲಿನ ಶಾಯಿ ತೋರಿಸದರೆ ಅವರಿಗೆ ತಿಂಡಿ ಪದಾರ್ಥಗಳಲ್ಲಿ 10% ರಿಯಾಯತಿ ನೀಡಲಾಗುವದು ಎಂದು ತಿಳಿಸಿದರು.

ಬರಪೀಡಿತ ಚಡಚಣ ತಾಲೂಕಿನ ಬಹಳಷ್ಟು ಮತದಾರರು ಜೀವನೋಪಾಯಕ್ಕಾಗಿ ದೂರದ ಗೋವಾ, ಪುಣೆ, ಮುಂಬೈ, ಹೈದ್ರಾಬಾದ್, ಹುಬ್ಬಳ್ಳಿ ಸೇರಿದಂತೆ ಮತ್ತಿತರ ಮಹಾನಗರಗಳಿಗೆ ಗುಳೆ ಹೋಗಿದ್ದು, ಮತದಾನವನ್ನು ಹಬ್ಬದಂತೆ ಸಂಭ್ರಮಿಸಲು ಅವರೆಲ್ಲರೂ ಕೂಡ ಮತದಾನಕ್ಕೆಂದು ತಮ್ಮ ಸ್ವಗ್ರಾಮಗಳಿಗೆ ಬರಲಿದ್ದಾರೆ. ಹೊಟೇಲ್ ಮಾಲೀಕನ ಈ ರಿಯಾಯತಿ ಘೋಷಣೆಯಿಂದ ಅಂಥವರಿಗೆ ಸಾಕಷ್ಟು ಅನುಕೂಲವಾಗಲಿದೆ. ಹೊಟೇಲ್ ಮಾಲೀಕ ಹಾಗೂ ಸಿಬ್ಬಂದಿ ಯಾವುದೇ ರಾಜಕೀಯ ಉದ್ದೇಶವಿಲ್ಲದೆ ಸಾಮಾಜಿಕ ಕಳಕಳಿ ತೋರಿರುವದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!