ನೀವು ತಿಳಿದಿರಬೇಕಾದ 10 ಸರ್ಕಾರಿ ಉಳಿತಾಯ ಯೋಜನೆಗಳಿವು !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮ್ಮ ಹಣವನ್ನು ಹೂಡಿಕೆ ಮಾಡಲು ಬಯಸುವ ವ್ಯಕ್ತಿಗಳಿಗೆ ವಿವಿಧ ಪ್ರಯೋಜನಗಳನ್ನು ನೀಡುವ ಹಲವಾರು ಸರ್ಕಾರಿ ಉಳಿತಾಯ ಯೋಜನೆಗಳು ಭಾರತದಲ್ಲಿವೆ. ತಮ್ಮ ಭವಿಷ್ಯದ ಅಗತ್ಯಗಳಿಗಾಗಿ ಹಣವನ್ನು ಉಳಿಸಲು ಮತ್ತು ದೇಶದಲ್ಲಿ ಉಳಿತಾಯದ ಸಂಸ್ಕೃತಿಯನ್ನು ಉತ್ತೇಜಿಸಲು ವ್ಯಕ್ತಿಗಳನ್ನು ಪ್ರೋತ್ಸಾಹಿಸಲು ಸರ್ಕಾರವು ವಿವಿಧ ಉಳಿತಾಯ ಯೋಜನೆಗಳನ್ನು ಜಾರಿಗೊಳಿಸಿದೆ. ಈ ಉಳಿತಾಯ ಯೋಜನೆಗಳು ವ್ಯಕ್ತಿಗಳಿಗೆ ಸುರಕ್ಷಿತ ಹೂಡಿಕೆಯ ಆಯ್ಕೆಯನ್ನು ಒದಗಿಸುತ್ತವೆ ಮತ್ತು ಅವರ ಉಳಿತಾಯವನ್ನು ಉತ್ಪಾದಕ ಹೂಡಿಕೆಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ, ಇದು ದೇಶದ ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ. ಈ ಹಿನ್ನೆಲೆಯಲ್ಲಿ ನೀವು ತಿಳಿದಿರಬೇಕಾದ 10 ಸರ್ಕಾರಿ ಉಳಿತಾಯ ಯೋಜನೆಗಳ ಕುರಿತಾದ ಮಾಹಿತಿ ಇಲ್ಲಿದೆ.

1. ರಾಷ್ಟ್ರೀಯ ಉಳಿತಾಯ ಯೋಜನೆ (ಮಾಸಿಕ ಆದಾಯ ಖಾತೆ):
ಈ ಯೋಜನೆಯ ಅಡಿಯಲ್ಲಿ ಮಾಸಿಕವಾಗಿ ಉಳಿತಾಯ ಮಾಡುವ ಮೂಲಕ ಅದರಿಂದ ಲಾಭ ಪಡೆಯಬಹುದಾಗಿದ್ದು ಕನಿಷ್ಟ ಉಳಿತಾಯ ಪಾವತಿ 1000 ರೂ.ಗಳಷ್ಟಿದೆ. ಒಂದೇ ಖಾತೆಯಲ್ಲಿ ಗರಿಷ್ಠ ರೂ 9 ಲಕ್ಷಗಳು ಮತ್ತು ಜಂಟಿ ಖಾತೆಯಲ್ಲಿ ರೂ 15 ಲಕ್ಷಗಳವರೆಗೆ ಉಳಿತಾಯ ಮಾಡಬಹುದಾಗಿದೆ. ಈ ಖಾತೆಯು ಐದು ವರ್ಷಗಳಿಗೆ ಮೆಚ್ಯೂರ್‌ ಆಗುತ್ತದೆ. ಉಳಿತಾಯ ಮೊತ್ತದ ಮೇಲೆ ಏಪ್ರಿಲ್ 01, 2023 ರಿಂದ ಜೂನ್ 30, 2023ರವರೆಗೆ 7.4 ಶೇಕಡಾ ಬಡ್ಡಿದರ ಸಿಗಲಿದೆ.

2. ರಾಷ್ಟ್ರೀಯ ಉಳಿತಾಯ ಸಮಯ ಠೇವಣಿ ಖಾತೆ (National Savings Time Deposit Account):
ಇದರ ಅಡಿಯಲ್ಲಿ 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷ ಹೀಗೆ ನಾಲ್ಕು ಉಳಿತಾಯ ವಿಭಾಗಗಳು ಲಭ್ಯವಿದ್ದು ಕನಿಷ್ಟ 1000ರೂ. ಠೇವಣಿಯಿಡ ಬೇಕಾಗುತ್ತದೆ. ಗರಿಷ್ಠ ಠೇವಣಿ ಮಿತಿ ಇಲ್ಲ. ಅಗತ್ಯವಿದ್ದರೆ ಆರು ತಿಂಗಳ ನಂತರ ಖಾತೆಯನ್ನು ಮುಚ್ಚಬಹುದು. 5 ವರ್ಷಗಳ ಸಮಯದ ಠೇವಣಿಗಳು ಆದಾಯ ತೆರಿಗೆ ಕಾಯಿದೆಯ 80-C ಕಡಿತಕ್ಕೆ ಅರ್ಹತೆ ಪಡೆದಿರುತ್ತವೆ. ಪ್ರಸ್ತುತ ಏಪ್ರಿಲ್ 01, 2023 ರಿಂದ ಜೂನ್ 30, 2023ರ ವರೆಗೆ 1 ವರ್ಷದ ಠೇವಣಿಗೆ 6.80 ಶೇ., 2 ವರ್ಷದ ಠೇವಣಿಗೆ 6.90 ಶೇ., 3 ವರ್ಷದ ಠೇವಣಿಗೆ 7 ಶೇ., 5 ವರ್ಷದ ಠೇವಣಿಗೆ 7.5 ಶೇಕಡಾ ಬಡ್ಡಿದರ ದೊರೆಯುತ್ತದೆ.

3. ಹಿರಿಯ ನಾಗರಿಕರ ಉಳಿತಾಯ ಯೋಜನೆ (Senior Citizens Savings Scheme);
ಇದರ ಅಡಿಯಲ್ಲಿ 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಅಥವಾ ವಿಆರ್‌ಎಸ್‌ ತೆಗೆದುಕೊಂಡವರಾಗಿದ್ದರೆ 55 ವರ್ಷ ಅಥವಾ ಅದಕ್ಕಿಂತ ಹೆಚ್ಚು ಆದರೆ 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಖಾತೆ ತೆಗೆಯಬಹುದಾಗಿದ್ದು ಕನಿಷ್ಟ 1000 ರೂ ಹಾಗು ಗರಿಷ್ಟ 30 ಲಕ್ಷ ರೂ.ವರೆಗೆ ಠೇವಣಿ ಇಡಬಹುದಾಗಿದೆ. ಈ ಠೇವಣಿಗಳ ಮೇಲೆ ಏಪ್ರಿಲ್ 01, 2023 ರಿಂದ ಜೂನ್ 30, 2023ರವರೆಗೆ 8.20 ಶೇಕಡಾ ಬಡ್ಡಿದರ ದೊರೆಯಲಿದ್ದು ಈ ಠೇವಣಿಗಳು ಆದಾಯ ತೆರಿಗೆ ಕಾಯಿದೆಯ 80-C ಕಡಿತಕ್ಕೆ ಅರ್ಹತೆ ಪಡೆಯುತ್ತವೆ.

4. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (National Saving certificate):
ಇದು 5 ವರ್ಷಗಳ ಉಳಿತಾಯ ಯೋಜನೆಯಾಗಿದ್ದು ಕನಿಷ್ಠ ಠೇವಣಿ ರೂ 1000 ರೂ.ಗಳಷ್ಟಿದ್ದು ಗರಿಷ್ಟ ಠೇವಣಿಗೆ ಮಿತಿ ಇಲ್ಲ. ವಯಸ್ಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿಯೂ ಖಾತೆ ತೆರೆಯಬಹುದಾಗಿದೆ. ಏಪ್ರಿಲ್ 01, 2023 ರಿಂದ ಜೂನ್ 30, 2023ರವರೆಗೆ 7.7 ಶೇಕಡಾ ಬಡ್ಡಿದರ ದೊರೆಯಲಿದೆ.

5. ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ (Public Provident Fund Scheme):
ಇದು ಉಳಿತಾಯದ ಜೊತೆಗೆ ತೆರಿಗೆ ಉಳಿತಾಯ ಸಾಧನವಾಗಿಯೂ ಬಳಕೆಯಾಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಕನಿಷ್ಟ 500 ರಿಂದ 1,50,000ರೂ. ವರೆಗೆ ಠೇವಣಿ ಇಡಬಹುದಾಗಿದೆ. ಖಾತೆ ತೆರೆದ ವರ್ಷದಿಂದ ಹದಿನೈದು ಸಂಪೂರ್ಣ ಆರ್ಥಿಕ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಖಾತೆಯು ಮೆಚ್ಯೂರ್‌ ಆಗುತ್ತದೆ. ಏಪ್ರಿಲ್ 01, 2023 ರಿಂದ ಜೂನ್ 30, 2023ರವರೆಗೆ 7.1 ಶೇಕಡಾ ಬಡ್ಡಿದರ ದೊರೆಯಲಿದೆ.

6. ಸುಕನ್ಯಾ ಸಮೃದ್ಧಿ ಖಾತೆ
ಹೆಣ್ಣು ಮಕ್ಕಳಿಗೆಂದೇ ವಿಶೇಷವಾಗಿ ಸರ್ಕಾರದಿಂದ ಜಾರಿ ಮಾಡಲ್ಪಟ್ಟ ಯೋಜನೆ. ಹೆಣ್ಣು ಮಗುವಿನ ಜನನದ ನಂತರ ಆಕೆ 10 ವರ್ಷ ತುಂಬುವವರೆಗೆ ಯಾವುದೇ ಸಮಯದಲ್ಲಿ ಸುಕನ್ಯಾ ಸಮೃದ್ಧಿ ಖಾತೆಯನ್ನು ತೆರೆಯಬಹುದು. ಕನಿಷ್ಟ 250 ರೂ.ಗಳನ್ನು ಠೇವಣಿ ಮಾಡಬೇಕಾಗುತ್ತದೆ. ನಂತರದ ವರ್ಷಗಳಲ್ಲಿ, ಕನಿಷ್ಠ 250 ರೂ. ಮತ್ತು ಗರಿಷ್ಠ 1.5 ಲಕ್ಷ ರೂ. ವರೆಗೆ ಒಂದು ಆರ್ಥಿಕ ವರ್ಷದಲ್ಲಿ ಠೇವಣಿ ಇಡಬಹುದಾಗಿದೆ. ಖಾತೆಯು ಪ್ರಾರಂಭವಾದ ದಿನಾಂಕದಿಂದ 21 ವರ್ಷಗಳವರೆಗೆ ಅಥವಾ ಹೆಣ್ಣುಮಗಳಿಗೆ 18 ವರ್ಷ ತುಂಬಿದ ನಂತರ ಅವಳ ಮದುವೆಯವರೆಗೆ ಈ ಖಾತೆ ಕಾರ್ಯನಿರ್ವಹಿಸುತ್ತದೆ. ಉನ್ನತ ಶಿಕ್ಷಣಕ್ಕಾಗಿ ಉಳಿತಾಯದ 50 ಶೇಕಡಾವನ್ನು ಹಿಂಪಡೆಯಲೂ ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 01, 2023 ರಿಂದ ಜೂನ್ 30, 2023 ಅವಧಿಗೆ 8 ಶೇಕಡಾ ಬಡ್ಡಿದರ ದೊರಕುತ್ತದೆ.

7. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ
ಮಹಿಳೆಯರಿಗಾಗಿಯೇ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ಉಳಿತಾಯ ಉಳಿತಾಯ ಯೋಜನೆಯಾಗಿದೆ.ಇದು ಎರಡು ವರ್ಷಗಳ ಅಲ್ಪಾವಧಿ ಉಳಿತಾಯ ಯೋಜನೆಯಾಗಿದ್ದು ಏಪ್ರಿಲ್ 2023 ರಿಂದ ಮಾರ್ಚ್ 2025 ರವರೆಗೆ 24 ತಿಂಗಳ ಅವಧಿಯಲ್ಲಿ ಉಳಿತಾಯ ಹಣದ ಮೇಲೆ ಸ್ಥಿರ ಬಡ್ಡಿದರವನ್ನು ನೀಡುತ್ತದೆ. ಈ ಯೋಜನೆಯು ಮಾರ್ಚ್ 31, 2025 ರವರೆಗೆ ಎರಡು ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಗರಿಷ್ಟ 2 ಲಕ್ಷ ರೂ. ಮಿತಿಯ ಮೇಲೆ 7.5 ಶೇಕಡಾದಷ್ಟು ಸ್ಥಿರ ಬಡ್ಡಿದರವನ್ನು ನೀಡುತ್ತದೆ. ಇತರ ಬ್ಯಾಂಕ್‌ ಎಫ್‌ಡಿ ಬಡ್ಡಿದರಗಳಿಗೆ ಹೋಲಿಸಿದರೆ ಈ ಬಡ್ಡಿದರವು ಉತ್ತಮವಾಗಿದೆ.

8. ಕಿಸಾನ್ ವಿಕಾಸ್ ಪತ್ರ
ಕಿಸಾನ್ ವಿಕಾಸ್ ಪತ್ರವು ಭಾರತೀಯ ಅಂಚೆ ಕಛೇರಿಯ ಮೂಲಕ ದೊರೆಯುವ ಉಳಿತಾಯ ಪ್ರಮಾಣಪತ್ರ ಯೋಜನೆಯಾಗಿದೆ. ಇದು ಸರಿಸುಮಾರು 10 ವರ್ಷಗಳ (120 ತಿಂಗಳುಗಳು) ಅವಧಿಯಲ್ಲಿ ಒಂದು ಬಾರಿ ಹೂಡಿಕೆಯನ್ನು ದ್ವಿಗುಣಗೊಳಿಸುತ್ತದೆ. ಉದಾಹರಣೆಗೆ, ರೂ.5,000 ಕ್ಕೆ ಕಿಸಾನ್ ವಿಕಾಸ್ ಪತ್ರವು ಮೆಚ್ಯೂರಿಟಿಯ ನಂತರ ರೂ.10,000 ಮೊತ್ತವನ್ನು ನೀಡುತ್ತದೆ.

9. ಮರುಕಳಿಸುವ ಠೇವಣಿ ಖಾತೆ ಯೋಜನೆ (Recurring Deposit Account Scheme):
ಈ ಯೋಜನೆಯು ನಿಯಮಿತ ಮಾಸಿಕ ಆಧಾರದ ಮೇಲೆ 5 ವರ್ಷಗಳವರೆಗೆ ಅಂದರೆ 60 ಮಾಸಿಕ ಕಂತುಗಳವರೆಗೆ ಉಳಿತಾಯ ಮಾಡಲು ಅವಕಾಶ ಕಲ್ಪಿಸುತ್ತದೆ. ಈ ಠೇವಣಿಗಳು ತ್ರೈಮಾಸಿಕ ಆಧಾರದ ಮೇಲೆ ಅನ್ವಯವಾಗುವ ಬಡ್ಡಿದರಗಳನ್ನು ಹೊಂದಿದ್ದು ಪ್ರಸ್ತುತ 6.2 ಶೇಕಡಾ ಬಡ್ಡಿದರ ದೊರೆಯುತ್ತಿದೆ.

10. ಪೋಸ್ಟ್ ಆಫೀಸ್ ಉಳಿತಾಯ ಖಾತೆ
ಈ ಯೋಜನೆಯಲ್ಲಿ ಒಬ್ಬ ವ್ಯಕ್ತಿಯು ತನ್ನ ಹೆಸರಿನಲ್ಲಿ ಪ್ರತ್ಯೇಕವಾಗಿ ಅಥವಾ ವಯಸ್ಕ ವ್ಯಕ್ತಿಯೊಂದಿಗೆ ಜಂಟಿಯಾಗಿ ಖಾತೆಯನ್ನು ತೆರೆಯಬಹುದು. ಅಪ್ರಾಪ್ತರ ಪರವಾಗಿಯೂ ಖಾತೆಯನ್ನು ತೆರೆಯಬಹುದು. ಕನಿಷ್ಠ 500 ರೂ ಠೇವಣಿ ಅಗತ್ಯವಿದೆ ಮತ್ತು ಗರಿಷ್ಠ ಠೇವಣಿಗೆ ಮಿತಿ ಇಲ್ಲ. ಈ ಯೊಜನೆಯು ಯೋಜನೆಗಳು 4% ಬಡ್ಡಿದರವನ್ನು ನೀಡುತ್ತಿವೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!