September 10, 2026
Thursday, September 10, 2026
spot_img

ಪ್ರಜಾಸೇವಕನಾಗಿ 100 ದಿನಗಳು ಪೂರೈಕೆ: ನಿಮ್ಮ ಸಂಕಷ್ಟಗಳಿಗೆ ಸ್ಪಂದಿಸಲು ಸದಾ ಮುಂದಿದೆ ನಮ್ಮ ‘ಹಸ್ತ’: ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

“ಜನರ ವಿಶ್ವಾಸವೇ ನಮ್ಮ ಶಕ್ತಿ, ಜನರ ಆಶಯವೇ ನಮ್ಮ ದಾರಿ ಹಾಗೂ ಕರ್ನಾಟಕದ ಪ್ರಗತಿಯೇ ನಮ್ಮ ಗುರಿ” ಎಂಬ ದೃಢ ಸಂಕಲ್ಪದೊಂದಿಗೆ, ಪ್ರಜಾಸೇವಕನಾಗಿ ನಾಡಿನ ಜನತೆಯ ಸೇವೆ ಮಾಡಲು ಅವಕಾಶ ದೊರೆತು ಇಂದಿಗೆ ಯಶಸ್ವಿ 100 ದಿನಗಳು ಪೂರೈಕೆಯಾಗಿವೆ. ಕಳೆದ ನೂರು ದಿನಗಳ ಈ ಅವಧಿಯು ಕೇವಲ ಒಂದು ಆರಂಭವಷ್ಟೇ ಆಗಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿಗೆ ವೇಗ ನೀಡುವ ನಿಟ್ಟಿನಲ್ಲಿ ಹಲವು ಮಹತ್ವದ ಯೋಜನೆಗಳನ್ನು ಈಗಾಗಲೇ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಈ ತಮ್ಮ ಎಕ್ಸ್‌ ಖಾತೆ ಪೋಸ್ಟ್‌ ಮಾಡಿರುವ ಸಿಎಂ, ನಾಡಿನ ಪ್ರತಿಯೊಬ್ಬ ನಾಗರಿಕರ ಬದುಕಿನಲ್ಲಿ ಹೊಸ ಬದಲಾವಣೆ ಹಾಗೂ ಸಕಾರಾತ್ಮಕ ಬೆಳವಣಿಗೆಯನ್ನು ತರಲು ಈ 100 ದಿನಗಳು ನಮಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿವೆ. ಜನರ ಆಶಯಗಳಿಗೆ ತಕ್ಕಂತೆ ಸ್ಪಂದಿಸುತ್ತಾ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಶಕ್ತ ಕರ್ನಾಟಕವನ್ನು ನಿರ್ಮಿಸುವುದೇ ನಮ್ಮ ಮೂಲ ಸಂಕಲ್ಪವಾಗಿದೆ. ಸಾರ್ವಜನಿಕರ ಸಂಕಷ್ಟಗಳನ್ನು ಆಲಿಸಲು ಮತ್ತು ಅವರ ಪ್ರತಿಯೊಂದು ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಲು ನಮ್ಮ ‘ಹಸ್ತ’ ಸದಾ ಮುಂದಿದೆ ಎಂದು ಬರೆದುಕೊಂಡಿದ್ದಾರೆ.

ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿ, ಉದ್ಯೋಗ ಸೃಷ್ಟಿ, ಆಧುನಿಕ ತಂತ್ರಜ್ಞಾನ, ಸುದೃಢ ಮೂಲಸೌಕರ್ಯ, ಗುಣಮಟ್ಟದ ಶಿಕ್ಷಣ, ಕೃಷಿ ಕ್ರಾಂತಿ ಹಾಗೂ ಜನರ ಒಟ್ಟಾರೆ ಜೀವನಮಟ್ಟವನ್ನು ಸುಧಾರಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ದೃಢ ಕರ್ನಾಟಕದ ಕನಸನ್ನು ನನಸು ಮಾಡಿ, ರಾಜ್ಯವನ್ನು ದೇಶದಲ್ಲೇ ಉತ್ತುಂಗಕ್ಕೆ ಕೊಂಡೊಯ್ಯಲು ನಾವೆಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕಿದೆ ಎಂದು ಕೆರೆ ನೀಡಿದ್ದಾರೆ.

ಮಹತ್ವದ ಯೋಜನೆಗಳಿಗೆ ಅನುಮೋದನೆ

ನಿನ್ನೆ (ಸೆ. 9) ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆದ ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಪ್ರಗತಿ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಹಲವು ಮಹತ್ವದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಅವುಗಳೆಂದರೆ:

ವಿದ್ಯಾರ್ಥಿ ಸಂಘಗಳ ಚುನಾವಣೆ

ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ 2026-27ರ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ಮರುಪರಿಚಯಿಸಲು ಸಂಪುಟ ಒಪ್ಪಿಗೆ ನೀಡಿದೆ. ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳ ನೇರ ಹಸ್ತಕ್ಷೇಪವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಜತೆಗೆ, ಈ ಚುನಾವಣೆಗಳಲ್ಲಿ ಯಾವುದೇ ಜಾತಿ ಆಧಾರಿತ ಮೀಸಲಾತಿ ಇರುವುದಿಲ್ಲ.

ಉಚಿತ ನಿವೇಶನಗಳ ವಿತರಣೆ

ರಾಜ್ಯಾದ್ಯಂತ ವಸತಿ ರಹಿತ ಬಡ ಜನರಿಗಾಗಿ ಬರೋಬ್ಬರಿ 15 ಲಕ್ಷ ವಸತಿ ನಿವೇಶನಗಳನ್ನು ಉಚಿತವಾಗಿ ವಿತರಿಸಲು ಸಂಪುಟ ಮಹತ್ವದ ತೀರ್ಮಾನ ಕೈಗೊಂಡಿದೆ. ಪ್ರತಿಯೊಂದು ಜಿಲ್ಲೆಯಲ್ಲೂ ತಲಾ 50,000 ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಈ ಯೋಜನೆಯಡಿ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST), ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಇತರ ಬಡ ಕುಟುಂಬಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ಕರ್ನಾಟಕ ಏರೋಸ್ಪೇಸ್ ನೀತಿ 2026-31 ಅನುಮೋದನೆ

ರಾಜ್ಯದಲ್ಲಿ ಏರೋಸ್ಪೇಸ್, ರಕ್ಷಣೆ, ಮತ್ತು ವಿಮಾನಯಾನ ಉತ್ಪಾದನಾ ವಲಯವನ್ನು ಬೆಂಗಳೂರಿನಿಂದ ಆಚೆಗೂ ವಿಸ್ತರಿಸುವ ಉದ್ದೇಶದಿಂದ ಈ ಹೊಸ ನೀತಿಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯ ಮೂಲಕ ಸುಮಾರು 60,000 ಕೋಟಿ ಹೂಡಿಕೆ ಆಕರ್ಷಿಸುವ ಹಾಗೂ 60,000 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಬೃಹತ್ ಗುರಿ ಹೊಂದಲಾಗಿದೆ.

ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆ

ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರ ಕಲ್ಯಾಣಕ್ಕಾಗಿ ಜಾರಿಗೆ ತರಲಾದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯಡಿ 3 ಎಕರೆ ಅಥವಾ ಅದಕ್ಕಿಂತ ಕಡಿಮೆ ಜಮೀನು ಹೊಂದಿರುವ ಬಡ ರೈತರಿಗೆ ಅವರ ಕೃಷಿ ಭೂಮಿಯನ್ನು ಮರಳಿ ಹಸನುಗೊಳಿಸಲು ಸರ್ಕಾರದಿಂದಲೇ ಸಂಪೂರ್ಣ ಉಚಿತವಾಗಿ ಉಳುಮೆ ಮಾಡಿಕೊಡಲಾಗುತ್ತದೆ. ಇದಕ್ಕಾಗಿ ಖಾಸಗಿ ಟ್ರ್ಯಾಕ್ಟರ್‌ಗಳನ್ನು ಬಾಡಿಗೆಗೆ ಪಡೆಯುವುದರ ಜತೆಗೆ ಸರ್ಕಾರವೇ ನೇರವಾಗಿ ಹೊಸ ಟ್ರ್ಯಾಕ್ಟರ್‌ಗಳನ್ನು ಖರೀದಿಸಲಿದ್ದು, ಮೊದಲ ಹಂತದಲ್ಲಿ 152.28 ಕೋಟಿ ವೆಚ್ಚದಲ್ಲಿ ರಾಜ್ಯದ 31 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಸಂಪುಟ ಸಭೆ ಹಸಿರು ನಿಶಾನೆ ನೀಡಿದೆ.

ಶಕ್ತಿ ಯೋಜನೆಯ ಸ್ಮಾರ್ಟ್‌ ಕಾರ್ಡ್‌

ಮಹಿಳೆಯರ ಉಚಿತ ಬಸ್ ಪ್ರಯಾಣದ ‘ಶಕ್ತಿ ಯೋಜನೆ’ಯನ್ನು ಮತ್ತಷ್ಟು ವ್ಯವಸ್ಥಿತಗೊಳಿಸಲು 237 ಕೋಟಿ ರೂ. ವೆಚ್ಚದಲ್ಲಿ ಪಿಪಿಪಿ ಮಾದರಿಯಲ್ಲಿ ಈ ಸ್ಮಾರ್ಟ್ ಕಾರ್ಡ್ ಯೋಜನೆಯನ್ನು ಜಾರಿಗೊಳಿಸಲು ಸಂಪುಟ ಒಪ್ಪಿಗೆ ನೀಡಿದೆ.

ಗ್ರಾಮೀಣ ಯುವ ಕ್ಲಬ್‌ಗಳ ಸ್ಥಾಪನೆ

ಗ್ರಾಮೀಣ ಭಾಗದ ಯುವಜನರಲ್ಲಿ ನಾಗರಿಕ ಜವಾಬ್ದಾರಿ, ಸಾಮಾಜಿಕ ಸಾಮರಸ್ಯ ಮತ್ತು ಜಾತ್ಯತೀತ ಮನೋಭಾವವನ್ನು ಉತ್ತೇಜಿಸಲು ರಾಜ್ಯದಾದ್ಯಂತ ಸುಮಾರು 10,000 ಯುವ ಕ್ಲಬ್‌ಗಳನ್ನು ಸ್ಥಾಪಿಸಲು ಸಂಪುಟ ಸಭೆಯಲ್ಲಿ ಹಸಿರು ನಿಶಾನೆ ನೀಡಲಾಗಿದೆ.

ಉದ್ಯೋಗ ಪ್ರೋತ್ಸಾಹಕ ಯೋಜನೆ

ಸ್ಥಳೀಯ ಯುವಕ-ಯುವತಿಯರಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಹೊಸ ಉದ್ಯೋಗ ಪ್ರೋತ್ಸಾಹಕ ಯೋಜನೆ ಹಾಗೂ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಪ್ರಸ್ತಾವನೆಗಳಿಗೂ ಅನುಮೋದನೆ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !