1008 ಕಿ.ಮೀ. ರಾಜ್ಯ ಹೆದ್ದಾರಿ ಮರು ಡಾಂಬರೀಕರಣ: ಡಿಪಿಆರ್ ಸಿದ್ಧ ಪಡಿಸಲು ಸಿಎಂ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಕೆ-ಶಿಪ್, ಎಸ್.ಎಚ್.ಡಿ.ಪಿ. ಹಾಗೂ ಕೆ.ಆರ್.ಡಿ.ಸಿ.ಎಲ್. ವತಿಯಿಂದ ಅಭಿವೃದ್ಧಿ ಪಡಿಸಲಾಗಿದ್ದ ರಸ್ತೆಗಳ ಪೈಕಿ ಜೀವಿತಾವಧಿ ಮುಕ್ತಾಯಗೊಂಡ 1008 ಕಿ.ಮೀ. ರಾಜ್ಯ ಹೆದ್ದಾರಿಗಳ ಮರುಡಾಂಬರೀಕರಣಕ್ಕೆ ಡಿಪಿಆರ್ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಿಎಂ, ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಅಗತ್ಯಕ್ಕೆ ಅನುಗುಣವಾಗಿ, ಸಂಚಾರ ದಟ್ಟಣೆಯನ್ನು ಗಮನದಲ್ಲಿರಿಸಿಕೊಂಡು ರೂಪಿಸಬೇಕು. ಬಿಡುಗಡೆ ಗೊಳಿಸಿದ ಅನುದಾನದ ಗರಿಷ್ಠ ಸದ್ಬಳಕೆಯಾಗಬೇಕು ಎಂದರು.

ರಾಜ್ಯ ವ್ಯಾಪಿ ವಿವಿಧ ಎಂಜಿನಿಯರಿಂಗ್ ಇಲಾಖೆಗಳ ಏಕರೂಪ ದರಪಟ್ಟಿಯನ್ನು ಲೋಕೋಪಯೋಗಿ ಇಲಾಖೆಯಡಿ ಜಾರಿಗೆ ತರಲಾಗುತ್ತಿದ್ದು, ಇದರಂತೆಯೇ ಸರ್ಕಾರಿ ಕಟ್ಟಡಗಳಲ್ಲಿ ಬಳಕೆಯಾಗುವ ವಸ್ತುಗಳಿಗೆ ಕೂಡ ಏಕರೂಪ ದರಪಟ್ಟಿಯನ್ನು ರೂಪಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದರು.

ರಾಜ್ಯ ಹೆದ್ದಾರಿಗಳು ಜಿಲ್ಲಾ ಮುಖ್ಯ ರಸ್ತೆಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಸಂಯೋಜನೆ (integration)ಯಾಗಬೇಕು. ಇದಕ್ಕೆ ಪೂರಕವಾಗಿ ರಸ್ತೆ ತಜ್ಞರಿಂದ ಮಾಸ್ಟರ್ ಪ್ಲ್ಯಾನ್ ಸಿದ್ಧ ಪಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಆಂಧ್ರಪ್ರದೇಶದ ಶ್ರೀಶೈಲದಲ್ಲಿ ಇಲಾಖೆಯ ಒಡೆತನದ ಭೂಮಿಯಲ್ಲಿ ಕರ್ನಾಟಕ ವಸತಿ ಸಂಕೀರ್ಣ ನಿರ್ವಹಿಸಲು ₹ 45 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿಗಳು ತಿಳಿಸಿದರು.

ಸಭೆಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಲೋಕೋಪಯೋಗಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಬಿ.ಹೆಚ್. ಅನಿಲ್ ಕುಮಾರ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!