ಜ್ವಾಲಾಮುಖಿ ಸ್ಫೋಟ: 11 ಪರ್ವತಾರೋಹಿಗಳ ಸಾವು, 12 ಮಂದಿ ನಾಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಇಂಡೋನೇಷ್ಯಾದ ಮೌಂಟ್ ಮರಾಪಿಯಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, 11 ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. 12 ಪರ್ವತಾರೋಹಿಗಳ ಪತ್ತೆಗೆ ಶೋಧಕಾರ್ಯ ನಡೆಸಲಾಗುತ್ತಿದೆ.

ರಕ್ಷಣಾ ಕಾರ್ಯಕರ್ತರು ಇಂದು ಬೆಳಗ್ಗೆ 11 ಪರ್ವತಾರೋಹಿಗಳ ಮೃತದೇಹಗಳನ್ನು ಪತ್ತೆ ಮಾಡಿದ್ದಾರೆ. ಇನ್ನೂ ನಾಪತ್ತೆಯಾಗಿರುವ ಹಲವು ಪರ್ವತಾರೋಹಿಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಪಶ್ಚಿಮ ಸುಮಾತ್ರದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಮುಖ್ಯಸ್ಥ ಅಬ್ದುಲ್ ಮಲಿಕ್ ತಿಳಿಸಿದರು.

ಶನಿವಾರ ಸುಮಾರು 75 ಪರ್ವತಾರೋಹಿಗಳು 2,900 ಮೀಟರ್ ಎತ್ತರದ ಪರ್ವತ ಹತ್ತಲು ಪ್ರಾರಂಭಿಸಿದ್ದರು. ದಿಢೀರ್ ಜ್ವಾಲಾಮುಖಿ ಸ್ಫೋಟಗೊಂಡು ದಟ್ಟ ಹೊಗೆ ಆವರಿಸಿದ್ದರಿಂದ ಅವರು ಸಿಲುಕಿಕೊಂಡಿದ್ದರು. ಈ ಪೈಕಿ ಎಂಟು ಮಂದಿಗೆ ಸುಟ್ಟ ಗಾಯಗಳಾಗಿವೆ. ಓರ್ವನ ಕೈ, ಕಾಲುಗಳು ಮುರಿದಿವೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪಡಂಗ್‌ನ ಸ್ಥಳೀಯ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯ ಅಧಿಕಾರಿ ಹ್ಯಾರಿ ಅಗಸ್ಟಿಯನ್ ತಿಳಿಸಿದ್ದಾರೆ.

ಮೌಂಟ್ ಮರಾಪಿಯಲ್ಲಿ ಸ್ಫೋಟ:

ಪಶ್ಚಿಮ ಸುಮಾತ್ರದ ಆಗಮ್ ಪ್ರಾಂತ್ಯದಲ್ಲಿರುವ ಮೌಂಟ್ ಮರಾಪಿಯಲ್ಲಿ ಭಾನುವಾರ ಹಠಾತ್ ಸ್ಫೋಟಗೊಂಡಿದ್ದರಿಂದ ಆಕಾಶದಲ್ಲಿ 3,000 ಮೀಟರ್ ಎತ್ತರದವರೆಗೂ ಬೂದಿ ಹಾರಿದ್ದು, ದಟ್ಟ ಪದರ ಆವರಿಸಿದೆ. ಬೂದಿ ಆವರಿಸಿದ ಮೋಡಗಳು ಹಲವಾರು ಕಿಲೋಮೀಟರ್‌ಗಳವರೆಗೆ ಹರಡಿಕೊಂಡಿರುವುದು ಕಂಡುಬಂದಿದೆ. ಪಟ್ಟಣಗಳು ಹಾಗೂ ಗ್ರಾಮಗಳು ಜ್ವಾಲಾಮುಖಿಯ ಅವಶೇಷಗಳಿಂದ ಮುಚ್ಚಿಹೋಗಿವೆ. ಶನಿವಾರ 9,480 ಅಡಿಗಳಷ್ಟು ದೂರದ ಪರ್ವತದ ವ್ಯಾಪ್ತಿಯಲ್ಲಿ ಲಾವಾ ಆವರಿಸಿತ್ತು.

ಇಲ್ಲಿಯವರೆಗೆ 49 ಜನರನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಉಳಿದವರ ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!