11 ಸಾವಿರ ರೇಷ್ಮೆ ಸೀರೆ, 750 ಜೊತೆ ಚಪ್ಪಲಿ, 7 ಕೆಜಿ ಚಿನ್ನಾಭರಣ: ಜಯಲಲಿತಾ ವಸ್ತುಗಳ ಹಸ್ತಾಂತರ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್;

ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾ ಅವರ 11,344 ರೇಷ್ಮೆ ಸೀರೆ, 750 ಜೋಡಿ ಚಪ್ಪಲಿ ಸೇರಿದಂತೆ ಆಸ್ತಿ ಪತ್ರ ಹಸ್ತಾಂತರ ಪ್ರಕ್ರಿಯೆ ಸಿಸಿಎಚ್ ಕೋರ್ಟ್ ಹಾಲ್ 34ರಲ್ಲಿ ನಡೆಯಿತು.

ಇಂದು ಮತ್ತು ನಾಳೆ ಹಸ್ತಾಂತರ ಪ್ರಕ್ರಿಯೆ ನಡೆಯಲಿದ್ದು, ಜಯಯಲಲಿತಾ ಅವರಿಗೆ ಸಂಬಂಧಿಸಿದ ಆಸ್ತಿಪತ್ರಗಳು, 11,344 ರೇಷ್ಮೆ ಸೀರೆಗಳು, 7040 ಗ್ರಾಂ ತೂಕದ 468 ಬಗೆಯ ಚಿನ್ನ, ವಜ್ರಖಚಿತ ಆಭರಣಗಳು ಹಾಗೂ 750 ಜೊತೆ ಚಪ್ಪಲಿಗಳು, ವಾಚ್‌ಗಳು ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ.

ಈಗಾಗಲೇ ತಮಿಳುನಾಡಿನಿಂದ ಪೊಲೀಸರು ಬಿಗಿ ಭದ್ರತೆಯಲ್ಲಿ ಬೆಂಗಳೂರಿಗೆ ಆಗಮಿಸಿದ್ದು, ಇಂದು (ಫೆಬ್ರವರಿ 14) ಅಥವಾ ನಾಳೆ(ಫೆಬ್ರವರಿ 15) ತೆಗೆದುಕೊಂಡು ಹೋಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಜಯಲಲಿತಾ ಅವರ ಸಂಬಂಧಿಕರು ಎಂದು ಹೇಳಿಕೊಂಡಿದ್ದ ದೀಪ ಹಾಗೂ ದೀಪಕ್ ಎಂಬುವವರು ತಾವು ಜಯಲಲಿತಾ ಅವರ ಸಂಬಂಧಿಕರಾಗಿದ್ದು, ಜಯಲಲಿತಾ ಒಡವೆಯನ್ನ ನಮಗೆ ಕೊಡಿ ಎಂದು ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿಯನ್ನ ಸಲ್ಲಿಸಿದ್ದರು. ಆದರೆ, ಹೈಕೋರ್ಟ್ ಅವರ ಅರ್ಜಿಯನ್ನು ವಜಾ ಮಾಡಿತ್ತು.

ಇಂದು ನ್ಯಾಯಾಧೀಶರ ಸಮ್ಮುಖದಲ್ಲಿ ತಮಿಳುನಾಡು ಸರ್ಕಾರಕ್ಕೆ ಎಲ್ಲಾ ವಸ್ತುಗಳನ್ನು ವರ್ಗಾವಣೆ ಮಾಡಲಾಗುತ್ತಿದೆ. ವಕೀಲರು ಹಾಗೂ ತಮಿಳುನಾಡಿನ ಕೆಲವು ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಪ್ರತಿಯೊಂದು ಮಾಹಿತಿಯನ್ನು ನೀಡಿ ಚಿನ್ನದ ಒಡವೆಗಳನ್ನು ತೂಕವನ್ನು ಹಾಕುತ್ತಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರಿಂದ ಮುಟ್ಟುಗೋಲು ಹಾಕಿಕೊಂಡಿದ್ದ ಬೆಲೆ ಬಾಳುವ ವಸ್ತುಗಳು ಮತ್ತು ಆಸ್ತಿಗಳನ್ನು ಹರಾಜು ಹಾಕುವ ಬದಲು ತಮಿಳುನಾಡು ಸರ್ಕಾರದ ಸುಪರ್ದಿಗೆ ನೀಡುವಂತೆ ವಿಶೇಷ ನ್ಯಾಯಾಲಯ ಈ ಹಿಂದೆ ಆದೇಶಿಸಿತ್ತು.

ಏನೆಲ್ಲಾ ಇವೆ?
7040 ಗ್ರಾಂ ತೂಕದ 468 ಬಗೆಯ ಚಿನ್ನ, ವಜ್ರಖಚಿತ ಆಭರಣಗಳು, 700 ಕೆ.ಜಿ ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜರೇಟರ್, 10 ಟಿವಿ ಸೆಟ್, 8 VCR, 1 ವಿಡಿಯೋ ಕ್ಯಾಮರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್ ರೆಕಾರ್ಡರ್ ಹಾಗೂ 1040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್​ಗಳು ತಮಿಳುನಾಡು ಸರ್ಕಾರಕ್ಕೆ ಸೇರಲಿವೆ.

ವಿಶೇಷ ನ್ಯಾಯಾಲಯವು ಬೆಲೆ ಬಾಳುವ ವಸ್ತುಗಳು, ಚಿನ್ನ ಮತ್ತು ವಜ್ರಾಭರಣಗಳನ್ನು ಹಿಂದಿರುಗಿಸಲು 2024ರ ಫೆ.19ಕ್ಕೆ ದಿನಾಂಕ ನಿಗದಿಪಡಿಸಿತ್ತು. 2024ರ ಮಾರ್ಚ್ 6 ಮತ್ತು 7ರಂದು ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲು ಅಧಿಕೃತ ಅಧಿಕಾರಿಗಳನ್ನು ನಿಯೋಜಿಸುವಂತೆ ತಮಿಳುನಾಡು ಸರಕಾರಕ್ಕೆ ನಿರ್ದೇಶನ ನೀಡಿತ್ತು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!