12 ವರ್ಷಕ್ಕೊಮ್ಮೆ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ: ಸಿಎಂ ಬೊಮ್ಮಾಯಿ ಭರವಸೆ

ಹೊಸದಿಗಂತ ವರದಿ,ಕೆ.ಆರ್.ಪೇಟೆ :

ಪ್ರತಿ 12 ವರ್ಷಕ್ಕೊಮ್ಮೆ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ ನಡೆಯುವಂತೆ ಸರ್ಕಾರಿ ಆದೇಶ ಹೊರಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
ಭಾನುವಾರ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳದ ಸಮಾರೋಪದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇದೊಂದು ಪವಿತ್ರ ಕ್ಷೇತ್ರವಾಗಿ ಮಾತ್ರವಲ್ಲದೆ ಪ್ರವಾಸೋದ್ಯಮ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸುತ್ತೇನೆ. ಇಲ್ಲಿ ಪ್ರತಿ ನಿತ್ಯ ಧಾರ್ಮಿಕ ಕೈಂಕರ್ಯ ನಡೆಯಲು ಹಾಗೂ ಸಂಗಮದ ಅಭಿವೃದ್ಧಿಗೆ ಅಗತ್ಯವಿರುವಷ್ಟು ಅನುದಾನ ಕೊಡುವುದಾಗಿ ಭರವಸೆ ನೀಡಿದರು.
ಕುಂಭಮೇಳದಿಂದ ಪುಣ್ಯ:
ಕುಂಭಮೇಳದ ಪ್ರಾಪ್ತಿ ಪುಣ್ಯಲದಿಂದ ಬರುತ್ತದೆ. ಪಾಪವನ್ನು ಕಳೆದು ಪುಣ್ಯವನ್ನು ಬರಿಸಿಕೊಳ್ಳುವ ಧಾರ್ಮಿಕ ವಿಧಿವಿಧಾನ ಕುಂಭಮೇಳ. ನದಿಗಳು ಸಂಗಮವಾಗುವದೇ ತೀರ್ಥ ಕ್ಷೇತ್ರ. ನೀರಿಗೆ ಶಕ್ತಿಯಿದ್ದು ಸಮುದ್ರದಲ್ಲಿ ಸೇರುತ್ತದೆ. ನಮ್ಮ ಬದುಕು ಕೂಡ ಹತ್ತಾರು ಅನುಭವಗಳೇ ಅಂತರಾಳ. ನಿಂತ ನೀರಿನಿಂದ ಸಾಧನೆ ಆಗುವುದಿಲ್ಲ. ಹಾಗೆಯೇ ಮನಷ್ಯರು ಚಲನಶಕ್ತಿಯಿಂದ ಆಧ್ಯಾತ್ಮಿಕವಾಗಿ ಮುಂದೆ ಹೋಗಬೇಕು. ಆತ್ಮಸಾಕ್ಷಿ ಇದ್ದರೇ ಆತ್ಮಗೌರವ ಬರಲಿದೆ. ಆತ್ಮಗೌರವ ಇದ್ದವನಿಗೆ ಆತ್ಮಶಾಂತಿಯಿದ್ದು ಸ್ಥಿತಪ್ರಜ್ಞನಾಗುತ್ತಾನೆ. ಅಂತಹವನು ವಿಚಲಿತಗೊಳ್ಳುವುದಿಲ್ಲ. ಇದು ಪ್ರಾಪ್ತಿಯಾಗಬೇಕಾದರೇ ಒಂದು ಗುರು, ಇನ್ನೊಂದು ಗುರಿ ಇರಬೇಕು. ಭಕ್ತಿ ಅಂದರೇ ಉತೃಷ್ಠ ಪ್ರೀತಿ. ಕರಾರುರಹಿತ ಪ್ರೀತಿಯೇ ಭಕ್ತಿ. ಈ ಭಕ್ತಿಯನ್ನು ಗುರುವಿನಲ್ಲಿಡಬೇಕು. ಗುರುವಿನಲ್ಲಿ ಭಕ್ತಿ ಸಮರ್ಪಣೆ ಮಾಡಿ ಲೀನವಾಗಬೇಕು. ಗುರುವಿನ ಆಶಿರ್ವಾದವಿದ್ದರೇ ಮನುಷ್ಯನಲ್ಲಿ ತ್ರಿವೇಣಿ ಸಂಗಮವಾಗಿ ಮೋಕ್ಷ, ಸಾಕ್ಷತ್ಕಾರ ಸಿಗಲಿದೆ ಎಂದರು.
ದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅವಧೂತ ವಿನಯ್ ಗುರೂಜಿ, ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಪಾದರು, ಮಾದರಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರಚನ್ನಯ್ಯ ಸ್ವಾಮೀಜಿ, ಗುಜರಾತ್‌ನ ಹಿಂದೂ ಧರ್ಮ ಆಚಾರ್ಯ ಸಭಾದ ಶ್ರೀ ಪರಮಾತ್ಮಾನಂದ ಸರಸ್ವತಿ ಸ್ವಾಮೀಜಿ, ಶಾಸಕ ಹರ್ಷವರ್ಧನ್, ಮಾಜಿ ಸಚಿವ ಬಿ.ಸೋಮಶೇಖರ್, ಮಾಜಿ ಶಾಸಕ ಡಿ.ಮಾದೇಗೌಡ, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಕಾ.ಪು.ಸಿದ್ಧಲಿಂಗಸ್ವಾಮಿ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!