ಎನ್‌ಆರ್‌ಐಗಳಿಂದ ಭಾರತಕ್ಕೆ ಹಣ ವರ್ಗಾವಣೆಯಲ್ಲಿ 12 ಶೇಕಡಾ ಹೆಚ್ಚಳ- 100 ಬಿಲಿಯನ್‌ ಡಾಲರ್‌ ಗೂ ಅಧಿಕ ರವಾನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಉದ್ಯೋಗ ಇತ್ಯಾದಿ ಕಾರಣಗಳಿಂದ ಭಾರತದಿಂದ ಹೊರಗಿರುವ ಎನ್‌ಆರ್‌ಐಗಳು ದೇಶಕ್ಕೆ ನೀಡುವ ಕೊಡುಗೆಯಲ್ಲಿ ಹೆಚ್ಚಳವಾಗಿದ್ದು ದೇಶಕ್ಕೆ ಹಣ ವರ್ಗಾವಣೆಯಲ್ಲಿ 12 ಶೇಕಡಾ ಹೆಚ್ಚಳವಾಗಿದೆ. 2022ರಲ್ಲಿ ವಿದೇಶಿ ಭಾರತೀಯರಿಂದ ದೇಶಕ್ಕೆ ಸುಮಾರು 100 ಬಿಲಿಯನ್‌ ಡಾಲರ್‌ ಗೂ ಅಧಿಕ ಹಣ ರವಾನೆಯಾಗಿದೆ. ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಾಹಿತಿ ಹಂಚಿಕೊಂಡಿದ್ದು ಪ್ರವಾಸಿ ಭಾರತೀಯರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್ (ಪಿಬಿಡಿ) ಸಮಾವೇಶದಲ್ಲಿ ಅನಿವಾಸಿ ಭಾರತೀಯರನ್ನು ಭಾರತದ ನಿಜವಾದ ರಾಯಭಾರಿಗಳು ಎಂದು ಹೊಗಳಿದ ಅವರು ಸಾಧ್ಯವಾದಷ್ಟು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಮತ್ತು ಸೇವೆಗಳನ್ನು ಬಳಸುವಂತೆ ಮನವಿ ಮಾಡಿದ್ದು ವೈಯಕ್ತಿಕ ಬ್ರ್ಯಾಂಡ್ ಅನ್ನು ಜಗತ್ತಿನಾದ್ಯಂತ ಪ್ರಚಾರ ಮಾಡಬಹುದು ಎಂದದಿದ್ದಾರೆ. ಅವರು ಈ ಸಂದರ್ಭದಲ್ಲಿ ಹೇಳಿದ್ದಿಷ್ಟು. “ಚೀನಾ ಪ್ಲಸ್ ಒನ್ ನೀತಿಯ ನಂತರ ಜಗತ್ತು ಯುರೋಪಿಯನ್ ಯೂನಿಯನ್ (ಇಯು) ಪ್ಲಸ್ ಒನ್ ನೀತಿಯ ಬಗ್ಗೆ ಮಾತನಾಡುತ್ತಿದೆ. ಚೀನಾ ಮತ್ತು ಯುರೋಪನ್ನು ಹೊರತುಪಡಿಸಿ ಕಾರ್ಖಾನೆಗಳ ಸ್ಥಾಪನೆಗೆ ಬಹುರಾಷ್ಟ್ರೀಯ ಕಂಪನಿಗಳು ಎದುರು ನೋಡುತ್ತಿರೋ ಸಮಯದಲ್ಲಿ ಭಾರತದಲ್ಲಿ ಅವುಗಳನ್ನು ಸ್ಥಾಪನೆಗೆ ಸರ್ಕಾರ ಪ್ರಯತ್ನಿಸುತ್ತಿದೆ. ಅವುಗಳಿಗೆ ಪ್ರಶಸ್ತ ಸ್ಥಳವನ್ನಾಗಿ ಭಾರತವನ್ನು ಪ್ರಸ್ತುತ ಪಡಿಸಲಾಗುತ್ತಿದೆ. ಭಾರತೀಯ ವಲಸಿಗರು ದೇಶದ ಸಣ್ಣ ಮತ್ತು ದೊಡ್ಡ ಉದ್ಯಮಿಗಳೊಂದಿಗೆ ಸಹಭಾಗಿಯಾಗಬೇಕು, ಇದರಿಂದಾಗಿ ಅನಿವಾಸಿ ಭಾರತೀಯರ ಉದ್ಯಮಶೀಲತೆಯ ಕೌಶಲ್ಯವನ್ನು ಬಳಸಿಕೊಂಡು ಮುಂದಿನ 25 ವರ್ಷಗಳಲ್ಲಿ ದೇಶದ ಅಭಿವೃದ್ಧಿ ವೇಗ ಪಡೆದುಕೊಳ್ಳಲಿದೆ.”

“ಅನಿವಾಸಿ ಭಾರತೀಯರಿಂದ ದೇಶಕ್ಕೆ ಸಿಗುತ್ತಿರುವ ಕೊಡುಗೆ 100 ಬಿಲಿಯನ್‌ ಡಾಲರ್‌ ದಾಟಿರುವುದನ್ನು ನಾನು ಶ್ಲಾಘಿಸುತ್ತೇನೆ. ಸಾಂಕ್ರಾಮಿಕ ನಂತರ ಭಾರತೀಯ ಕಾರ್ಮಿಕರು ಮತ್ತೆ ವಿದೇಶಕ್ಕೆ ಹಿಂತಿರುಗುವುದಿಲ್ಲ ಎಂದು ಜನರು ಭಾವಿಸಿದ್ದರು. ಅವರು ಹಿಂತಿರುಗಿದ್ದಾರೆ ಮಾತ್ರವಲ್ಲದೆ ಹೆಚ್ಚಿನವರು ಬಹಳ ಉಪಯುಕ್ತ ಉದ್ಯೋಗಕ್ಕಾಗಿ ಹೋಗಿದ್ದು, ಒಂದು ವರ್ಷದೊಳಗೆ ರವಾನೆ ಸಂಖ್ಯೆಗಳು 12 ಶೇ. ಹೆಚ್ಚಾಗಿದೆ. ಮಾಹಿತಿ ತಂತ್ರಜ್ಞಾನ, ಡಿಜಿಟಲ್ ತಂತ್ರಜ್ಞಾನ, ಆಟೋಮೊಬೈಲ್, ಸೆಮಿಕಂಡಕ್ಟರ್ ವಿನ್ಯಾಸ, ಔಷಧೀಯ ಉತ್ಪಾದನೆ ಮತ್ತು ಇತರ ಕ್ಷೇತ್ರಗಳಲ್ಲಿ ಭಾರತೀಯ ವೃತ್ತಿಪರರ ಪ್ರಾಬಲ್ಯ ಹೆಚ್ಚಿದೆ. ದೇಶವು ಜ್ಞಾನ ಮತ್ತು ಪ್ರಗತಿಯ ಜಾಗತಿಕ ಕೇಂದ್ರವಾಗುತ್ತಿದೆ.”

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!